11,803 ಕೋಟಿ ರೂ. ಪೂರಕ ಅಂದಾಜು ಮಂಡಿಸಿದ ಯಡಿಯೂರಪ್ಪ

ಬೆಂಗಳೂರು, ಮಾ. 17: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, ಪ್ರಸಕ್ತ 2019-20ನೆ ಸಾಲಿನ 11,803.72 ಕೋಟಿ ರೂ.ಮೊತ್ತದ ಪೂರಕ ಅಂದಾಜುಗಳನ್ನು ಮಂಡನೆ ಮಾಡಿದ್ದಾರೆ.
ಮಂಗಳವಾರ ವಿಧಾನಸಭೆಯಲ್ಲಿ ಮೂರನೆ ಹಾಗೂ ಅಂತಿಮ ಕಂತನ್ನು ಸದನದಲ್ಲಿ ಮಂಡಿಸಿದ್ದು, ಬೇಡಿಕೆಗಳಲ್ಲಿ ತೋರಿಸಿರುವ ಉದ್ದೇಶಗಳಿಗಾಗಿ ಈ ವರ್ಷದಲ್ಲಿ ಅಗತ್ಯವಿರುವ ಹೆಚ್ಚಿನ ಪೂರಕ ಅನುದಾನಗಳಿಗೆ ಲೆಕ್ಕ ಮತ್ತು ಹೊಂದಾಣಿಕೆ ವಿಷಯಗಳಿಗೆ ಸಂಬಂಧಿಸಿವೆ ಎಂದು ತಿಳಿಸಲಾಗಿದೆ.
ಪೂರಕ ಅಮದಾಜುಗಳಲ್ಲಿ ಒದಗಿಸಿರುವ ಒಟ್ಟು ಮೊತ್ತ 11,803.72 ಕೋಟಿ ರೂ.ಗಳಲ್ಲಿ 378.81 ಕೋಟಿ ರೂ.ಗಳು ಪ್ರಭೃತ ವೆಚ್ಚ ಮತ್ತು 11,424.91 ಕೋಟಿ ರೂ.ಗಳು ಪುರಸ್ಕೃತ ವೆಚ್ಚ ಸೇರಿರುತ್ತದೆ. ಇದರಲ್ಲಿ 1,753.54 ಕೋಟಿ ರೂ.ಗಳು ಸಹ ಪುರಸ್ಕೃತವಾಗಬೇಕಾಗಿದ್ದು, ಇದನ್ನು ರಿಸರ್ವ್ ಫಂಡ್ ಠೇವಣಿಗಳಿಂದ ಭರಿಸಲಾಗುತ್ತದೆ.
ಸಂಚಿತ ನಿಧಿಯಿಂದ ಹೊರ ಹೋಗುವ ನಿವ್ವಳ ಮೊತ್ತ 10,050.18 ಕೋಟಿ ರೂ.ಗಳು ಇದರಲ್ಲಿ 2,676.80 ಕೋಟಿ ರೂ.ಗಳು ಕೇಂದ್ರ ಸಹಾಯಕ್ಕೆ ಸಂಬಂಧಿಸಿವೆ. ಮತ್ತು 8.81 ಕೋಟಿ ರೂ.ಗಳು ಲೆಕ್ಕ ಹೊಂದಾಣಿಕೆಗೆ ಸಂಬಂಧಿಸಿವೆ. ಆದುದರಿಂದ ಹೊರ ಹೋಗುವ ನಿವ್ವಳ ನಗದು ಮೊತ್ತ 7364.57 ಕೋಟಿ ರೂ.ಗಳಾಗಿರುತ್ತದೆ. ಇದನ್ನು ವೆಚ್ಚದ ಸೂಕ್ತ ಪರಿಸ್ಕೃತ ಆದ್ಯತೆಯ ಆಧಾರದ ಮೇಲೆ ಭರಿಸಲಾಗುವುದು ಎಂದು ಉಲ್ಲೇಖಿಸಲಾಗಿದೆ.





