ದ.ಕ. ಜಿಲ್ಲಾದ್ಯಂತ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ನಿರ್ಬಂಧ: 144(3) ಸೆಕ್ಷನ್‌ನಡಿ ಆದೇಶ ಹೊರಡಿಸಿದ ಡಿಸಿ

ಮಂಗಳೂರು, ಮಾ.17: ಕೊರೋನ ವೈರಸ್ ಭೀತಿ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಯ ಚರ್ಚ್, ಮಸೀದಿ, ದೇವಸ್ಥಾನ ಸೇರಿದಂತೆ ಎಲ್ಲಾ ಧಾರ್ಮಿಕ ಕೇಂದ್ರಗಳಲ್ಲಿ ಇಂದಿನಿಂದ (ಮಾ.17) ವಿಶೇಷ ಪೂಜೆಗಳು ಸೇರಿದಂತೆ ಎಲ್ಲ ರೀತಿಯ ಸೇವೆಗಳನ್ನು ಮುಂದಿನ ಆದೇಶದವರೆಗೆ ನಿರ್ಬಂಧಿಸಿ ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಆದೇಶ ಹೊರಡಿಸಿದ್ದಾರೆ.
144(3) ಸೆಕ್ಷನ್‌ನಡಿ ಆದೇಶ ಹೊರಡಿಸಿರುವ ಜಿಲ್ಲಾಧಿಕಾರಿ, ದ.ಕ. ಜಿಲ್ಲೆಯ ಎಲ್ಲಾ ದೇವಸ್ಥಾನ ಹಾಗೂ ಧಾರ್ಮಿಕ ಕೇಂದ್ರಗಳಲ್ಲಿ ದರ್ಶನಕ್ಕೆ ಮಾತ್ರ ಅವಕಾಶವಿದ್ದು, ಈಗಾಗಲೇ ನಿಗದಿಯಾಗಿರುವ ಜಾತ್ರೆ, ಉತ್ಸವಗಳಲ್ಲಿ ಸಿಬ್ಬಂದಿ ಮಾತ್ರವೇ ಭಾಗವಹಿಸತಕ್ಕದ್ದು. ದೇವಳಗಳಲ್ಲಿ ಜನರು ತಂಗುವಂತಿಲ್ಲ. ದೇವಳ, ಮಸೀದಿ, ಚರ್ಚ್‌ಗಳಿಗೆ ಸಾರ್ವಜನಿಕರು ಗುಂಪು ಗುಂಪಾಗಿ ಪ್ರವೇಶಿಸುವಂತಿಲ್ಲ ಎಂದು ತಿಳಿಸಿದ್ದಾರೆ.
ಬೀಚ್‌ಗಳಿಗೆ ಸಾರ್ವಜನಿಕ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಅದೇ ರೀತಿ ಬೇಸಿಗೆ ಶಿಬಿರ, ವಿಚಾರ ಸಂಕಿರಣ ಇತ್ಯಾದಿ ಆಯೋಜಿಸುವಂತಿಲ್ಲ. ಮದುವೆ ಸಮಾರಂಭಗಳಲ್ಲಿ ಹೆಚ್ಚಿನ ಜನಸಂದಣಿ ಸೇರದಂತೆ ಸರಳವಾಗಿ ಆಚರಿಸಬೇಕು. ಪಿ.ಜಿ., ವಸತಿ ನಿಲಯಗಳಲ್ಲಿ ಸ್ವಚ್ಛತೆ ಸೇರಿದಂತೆ ಸೂಕ್ತ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.





