ಮಂಗಳೂರು: ಸ್ಪಾರ್ ಸೇರಿ ಸೂಪರ್ ಮಾರ್ಕೆಟ್‌ಗಳಲ್ಲಿ ಸೂಚನೆಯೊಂದಿಗೆ ಶಾಪಿಂಗ್ ಅವಕಾಶ

ಮಂಗಳೂರು, ಮಾ.18: ಜನರಿಗೆ ದಿನನಿತ್ಯದ ವಸ್ತುಗಳ ಖರೀದಿಗೆ ಅವಕಾಶವಾಗುವಂತೆ ಸಮಯಾಧಾರದಲ್ಲಿ ಸ್ಪಾರ್ ಸೇರಿದಂತೆ ಸೂಪರ್ ಮಾರುಕಟ್ಟೆಗಳಲ್ಲಿ ಶಾಪಿಂಗ್‌ಗೆ ಅವಕಾಶವನ್ನು ನೀಡಿ ಮಳಿಗೆಯನ್ನು ತೆರೆಯಲು ಮಂಗಳೂರು ಮಹಾನಗರ ಪಾಲಿಕೆ ನಿರ್ದೇಶನ ನೀಡಿದೆ.
ಮೇಯರ್ ದಿವಾಕರ್ ಉಪಸ್ಥಿತಿಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿಯನ್ನು ನೀಡಿದ ಪಾಲಿಕೆ ಆಯುಕ್ತ ಶಾನಾಡಿ ಅಜಿತ್ ಹೆಗ್ಡೆ, ಕೊರೋನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಹೆಚ್ಚಿನ ಜನಸಂದಣಿಯನ್ನು ಸೆಳೆಯುವ ಮಾಲ್‌ಗಳಿಗೆ ಬಂದ್ ವಿಧಿಸಿ ಈಗಾಗಲೇ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಹೈಪರ್ ಮಾರುಕಟ್ಟೆ ಹಾಗೂ ಸೂಪರ್ ಮಾರುಕಟ್ಟೆಗಳು ಬಂದ್ ಆಗಿರುವುದರಿಂದ ಜನಸಾಮಾನ್ಯರಿಗೆ ದಿನನಿತ್ಯ ಬಳಕೆಯ ಸಾಮಗ್ರಿಗಳಿಗೆ ತೊಂದರೆಯಾಗುತ್ತಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.
ಒಂದು ವೇಳೆ ಇದರಿಂದ ಯಾವುದೇ ರೀತಿಯಲ್ಲಿ ತೊಂದರೆ ಆಗುವುದು ಕಂಡುಬಂದಲ್ಲಿ ಈ ವ್ಯವಸ್ಥೆಯನ್ನು ತಕ್ಷಣ ಬಂದ್ ಮಾಡಲಾಗುವುದು. ಹಾಗಾಗಿ ಜನಸಾಮಾನ್ಯರು ಈ ಬಗ್ಗೆ ಸಹಕರಿಸಬೇಕು. ಸದ್ಯ ಮಾಲ್‌ಗಳಲ್ಲಿನ ಹೈಪರ್ ಮಾರುಕಟ್ಟೆಗಳಲ್ಲಿ ಖರೀದಿದಾರರಿಗೆ ಮಾತ್ರವೇ ಅವಕಾಶ ಕಲ್ಪಿಸಿ ಸೂಕ್ತ ಮುಂಜಾಗೃತಾ ಕ್ರಮಗಳೊಂದಿಗೆ ಶಾಪಿಂಗ್‌ಗೆ ಅವಕಾಶ ನೀಡುವಂತೆ ಹೈಪರ್ ಮಾರುಕಟ್ಟೆಯವರಿಗೆ ಸೂಚನೆ ನೀಡಲಾಗಿದೆ. ಬೆಳಗ್ಗೆ 10ರಿಂದ 7 ಗಂಟೆಯವರೆಗೆ ತೆರೆಯಲು ಅವಕಾಶವಿರುತ್ತದೆ.
ಹ್ಯಾಂಡ್ ರೇಲಿಂಗ್, ಬಾಗಿಲು ಚಿಲಕಗಳು, ಹ್ಯಾಂಡಲ್‌ಗಳು, ನೆಲ, ಬಿಲ್ಡಿಂಗ್ ಟೇಬಲ್‌ಗಳು ಹಾಗೂ ವ್ಯಕ್ತಿ ಸ್ಪರ್ಶಿಸಬಹುದಾದ ಯಾವುದೇ ಮೇಲ್ಮೈಯನ್ನು ಸೋಡಿಯಂ ಹೈಪಿಯೋಕ್ಲೋರೈಟ್, ಬ್ಲೀಚಿಂಗ್ ಪೌಡರ್ ಅಥವಾ ಇನ್ನಾವುದೇ ಪರಿಣಾಮಕಾರಿ ಸೋಂಕು ನಿವಾರಕದಿಂದ ನಿಯತಕಾಲಿಕವಾಗಿ ಸ್ವಚ್ಛಗೊಳಿಸಲು ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದರು.
ಸಿಬ್ಬಂದಿಗೆ ಸ್ವಚ್ಥತೆ ಹಾಗೂ ನೈರ್ಮಲ್ಯತೆ ಬಗ್ಗೆ ಅರಿವು ಹಾಗೂ ತರಬೇತಿ ಮೂಡಿಸುವುದು, ಆರೋಗ್ಯದಲ್ಲಿ ತೊಂದರೆ ಕಾಣಿಸಿಕೊಂಡ ಸಿಬ್ಬಂದಿಗೆ ರಜೆ ನೀಡಿ ವೈದ್ಯಕೀಯ ಚಿಕಿತ್ಸೆ ಪಡೆಯಲು ಸಲಹೆ ನೀಡಬೇಕು. ಮಳಿಗೆಯ ಉತ್ಪನ್ನ ಹಾಗೂ ಸರಕುಗಳನ್ನು ಗ್ರಾಹಕರು ಆಧ್ಯವಾದಷ್ಟು ಅನಗತ್ಯವಾಗಿ ಸ್ಪರ್ಶಿಸದಂತೆ ತಡೆಯಲು ಸಲಹೆ ನೀಡಬೇಕು. ಬಿಲ್ಲಿಂಗ್ ಕೌಂಟರ್‌ಗಳಲ್ಲಿ ಜನಸಂದಣಿ ಆಗದ ರೀತಿ, ಅಂಗಡಿ ಮಾಲಕರು ಹಾಗೂ ಆಡಳಿತ ಮಂಡಳಿ ನಿಗಾ ವಹಿಸಲು ಸೂಚನೆ ನೀಡುವಂತೆಯೂ ತಿಳಿಸಲಾಗಿದೆ ಎಂದು ಮನಪಾ ಆಯುಕ್ತರು ತಿಳಿಸಿದರು.
ಗೋಷ್ಠಿಯಲ್ಲಿ ಉಪ ಮೇಯರ್ ವೇದಾವತಿ, ವಿಪಕ್ಷ ನಾಯಕ ಅಬ್ದುಲ್ ರವೂಫ್, ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ ಹಾಗು ಇತರರು ಉಪಸ್ಥಿತರಿದ್ದರು.







