'ನಾನು ಜೀವಂತವಾಗಿದ್ದೇನೆ': ತನ್ನ ಸಾವಿನ ಕುರಿತ ವದಂತಿ ಬಗ್ಗೆ ಕಲಬುರಗಿ ವೈದ್ಯ ಸ್ಪಷ್ಟನೆ
ಕೊರೋನ ವೈರಸ್

ಸಾಂದರ್ಭಿಕ ಚಿತ್ರ
ಕಲಬುರಗಿ, ಮಾ.18: ನಗರದಲ್ಲಿ ಕೊರೋನ ವೈರಸ್ ಸೋಂಕಿನಿಂದ ಮೃತನಾಗಿದ್ದ ವೃದ್ಧನಿಗೆ ಚಿಕಿತ್ಸೆ ನೀಡಿದ್ದ ವೈದ್ಯ ಸಾವನ್ನಪ್ಪಿದ್ದಾನೆ ಎಂದು ಸಾಮಾಜಿಕ ಜಾಲತಾಣದಲ್ಲಿ ವದಂತಿಯೊಂದು ಹರಿದಾಡುತ್ತಿದ್ದು, ಇದೊಂದು ಸುಳ್ಳು ಸುದ್ದಿ ಎಂದು ತಿಳಿದು ಬಂದಿದೆ.
ಈ ಕುರಿತು ನಗರ ಹೊರವಲಯದ ಇಎಸ್ಐ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವೈದ್ಯ ಪ್ರತಿಕ್ರಿಯಿಸಿ, ನನಗೆ ಕೊರೋನ ವೈರಸ್ ತಗಲಿರಬಹುದು. ಆದರೆ, ನಾನು ಸಾವನ್ನಪ್ಪಿದ್ದೇನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಬರುವುದೆಲ್ಲ ಸುಳ್ಳು ಸುದ್ದಿ. ನಾನು ಜೀವಂತವಾಗಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ಕೊರೋನ ಕಾಯಿಲೆ ಬಂದ ತಕ್ಷಣ ಯಾರು ಸಾವನ್ನಪ್ಪುವುದಿಲ್ಲ. ಚೀನಾದಲ್ಲಿ ಲಕ್ಷಾಂತರ ಜನರಿಗೆ ಕೊರೋನ ವೈರಸ್ ಬಂದರೂ ಶೇ.4ರಷ್ಟು ಪ್ರತಿಶತ ಜನ ಮಾತ್ರ ಸಾವನ್ನಪ್ಪಿದ್ದಾರೆ. ಜಿಲ್ಲಾಡಳಿತ ಕೂಡ ಸಾಮಾಜಿಕ ಜಾಲತಾಣದಲ್ಲಿ ವದಂತಿ ಹರಡಿದವರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ಅವರು ಮನವಿ ಮಾಡಿದರು.
ಇನ್ನು ಕಲಬುರಗಿಯಲ್ಲಿ ಕೊರೋನ ಸೋಂಕಿಗೆ ಸಾವನ್ನಪ್ಪಿದ ವೃದ್ಧರೊಬ್ಬರಿಗೆ ಚಿಕಿತ್ಸೆ ನೀಡಿದ್ದ ವೈದ್ಯರೊಬ್ಬರಿಗೂ ಕೊರೋನ ವೈರಸ್ ತಗುಲಿರುವ ಹಿನ್ನೆಲೆಯಲ್ಲಿ ಅವರ ಮನೆಯ 7 ಮಂದಿ ಸದಸ್ಯರಿಗೆ ಹೋಮ್ ಐಸೋಲೇಷನ್ ನಡೆಸಲಾಗುತ್ತಿದೆ. ಅಲ್ಲದೇ, ವೈದ್ಯನ ಜೊತೆ ನೇರ ಸಂಪರ್ಕದಲ್ಲಿದ್ದ 50 ಜನರ ಮೇಲೆ ಆರೋಗ್ಯ ಇಲಾಖೆ ತೀವ್ರ ನಿಗಾ ಇಟ್ಟಿದೆ.
ಮುಂದಿನ 14 ದಿನಗಳ ಕಾಲ ಅವರು ಮನೆಯಿಂದ ಹೊರ ಬರದಂತೆ ಹದ್ದಿನ ಕಣ್ಣಿಟ್ಟಿದೆ. ವೈದ್ಯನ ಜೊತೆ ಸಂಪರ್ಕದಲ್ಲಿದ್ದ ಮತ್ತಷ್ಟು ಜನರ ಹುಡುಕಾಟಕ್ಕೆ ಜಿಲ್ಲಾಡಳಿತ ಮುಂದಾಗಿದ್ದು, ಸದ್ಯ ಕಲಬುರಗಿ ಜಿಲ್ಲೆಯ 450 ಜನರನ್ನು ಹೋಮ್ ಐಸೋಲೇಷನ್ನಲ್ಲಿ ಇಡಲಾಗಿದೆ. ಇನ್ನು ವೈದ್ಯನ ಮನೆ ಸುತ್ತಮುತ್ತ ಪೊಲೀಸ್ ಬ್ಯಾರಿಕೇಡ್ ಅಳವಡಿಸಲಾಗಿದ್ದು, ಮನೆಯ ಸುತ್ತಮುತ್ತ ಯಾರೂ ಸುಳಿದಾಡದಂತೆ ಪೊಲೀಸರು ಎಚ್ಚರಿಕೆ ವಹಿಸಿದ್ದಾರೆ.
ಅಲ್ಲದೇ, ಕೊರೋನ ವೈರಸ್ನಿಂದ ಮೃತಪಟ್ಟ ವೃದ್ಧನ ಮಗಳ ಮನೆಯ ಸುತ್ತಮುತ್ತ ಬ್ಯಾರಿಕೇಡ್ ಅಳವಡಿಸಿ ನಿಗಾವಹಿಸಲಾಗಿದೆ. ವೈದ್ಯನ ಮಕ್ಕಳು ಯಾರ ಜೊತೆಗೆ ಸಂಪರ್ಕ ಹೊಂದಿದ್ದರು ಎಂಬುದರ ಕುರಿತು ಜಿಲ್ಲಾಡಳಿತ ಮಾಹಿತಿ ಕಲೆ ಹಾಕುತ್ತಿದ್ದು, ಅವರ ಮಕ್ಕಳು ನಗರದ ವಿವಿಧೆಡೆ ಸಂಚರಿಸಿ ಸ್ನೇಹಿತರನ್ನು ಭೇಟಿಯಾಗಿರುವ ಮಾಹಿತಿ ಲಭ್ಯವಾಗಿದೆ. ವೈದ್ಯರ ಮಕ್ಕಳನ್ನು ಮನೆಯಲ್ಲಿ ನಿಗಾ ವಹಿಸಿ ಅವರಿಂದ ಮಾಹಿತಿ ಸಂಗ್ರಹಿಸಲಾಗುತ್ತಿದೆ.
ವೈದ್ಯರ ಮನೆ, ವೃದ್ಧನ ಮಗಳ ಮನೆ ಕಂಟೋನ್ಮೆಂಟ್ ಝೋನ್ ಎಂದು ಘೋಷಿಸಲಾಗಿದ್ದು, ಅವರ ಮನೆಯ ಸುತ್ತಮುತ್ತಲಿನ ಐದು ಕಿ.ಮೀ.ವರೆಗೆ ಯಾರೂ ಸಂಚರಿಸುವಂತಿಲ್ಲ. ಅಲ್ಲದೇ, ಇಬ್ಬರ ಮನೆಯ ಓಣಿಯ ಜನರು ಯಾರು ಕೂಡ ಹೊರಬಾರದು ಎಂದು ಸೂಚಿಸಲಾಗಿದ್ದು, ಓಣಿಯಲ್ಲೇ ಆರೋಗ್ಯ ಅಧಿಕಾರಿಗಳನ್ನು ನೇಮಕ ಮಾಡಿ ಅಲ್ಲೇ ಕಟ್ಟೆಚ್ಚರ ವಹಿಸುವಂತೆ ಜಿಲ್ಲಾಧಿಕಾರಿ ಶರತ್.ಬಿ ಆರೋಗ್ಯ ಇಲಾಖೆಗೆ ಸೂಚನೆ ನೀಡಿದ್ದಾರೆ.







