ತುಂಬೆ ವೆಂಟೆಡ್ ಡ್ಯಾಂನಲ್ಲಿ ನೀರಿನ ಒಳಹರಿವು ಸ್ಥಗಿತ : ಸದ್ಯಕ್ಕಿಲ್ಲ ನೀರಿನ ರೇಶನಿಂಗ್
ಮಂಗಳೂರು, ಮಾ.18: ಬೇಸಿಗೆಯ ಕಾವು ಈ ಬಾರಿ ಜನವರಿ ತಿಂಗಳ ಅಂತ್ಯಕ್ಕೆ ಬಾಧಿಸಲಾರಂಭಿಸಿದ್ದು, ಕಳೆದೆರಡು ತಿಂಗಳಿನಿಂದೀಚೆಗೆ ಬಿಸಿಲ ಧಗೆ ಹೆಚ್ಚುತ್ತಲೇ ಸಾಗುತ್ತಿದೆ. ಈ ನಡುವೆ, ಮಂಗಳೂರು ಮಹಾನಗರ ಪಾಲಿಕೆಗೆ ನೀರು ಪೂರೈಕೆ ಮಾಡುವ ತುಂಬೆ ವೆಂಟೆಡ್ ಡ್ಯಾಂನಲ್ಲಿ ನೀರಿನ ಒಳ ಹರಿವು ಸ್ಥಗಿತಗೊಂಡಿದೆ. ಹಾಗಿದ್ದರೂ ಈ ಬಾರಿ ನಗರಕ್ಕೆ ನೀರಿನ ತೊಂದರೆ ಬಾಧಿಸದು ಎಂದು ಮನಪಾ ಅಧಿಕಾರಿಗಳು ಅಭಿಪ್ರಾಯಿಸಿದ್ದಾರೆ.
ಬುಧವಾರ ತುಂಬೆ ವೆಂಟೆಡ್ ಡ್ಯಾಂನಲ್ಲಿ ನೀರಿನ ಮಟ್ಟ 5.9 ಮೀಟರ್‌ಗಳಷ್ಟಿದೆ. ಆರು ಮೀಟರ್ ಸಾಮರ್ಥ್ಯದ ಡ್ಯಾಂನಲ್ಲಿ ಸದ್ಯ ಒಳ ಹರಿವು ಸ್ಥಗಿತಗೊಂಡಿರುವ ಕಾರಣ ತೆರೆಯಲಾಗಿದ್ದ ಗೇಟ್ ಬಂದ್ ಮಾಡಲಾಗಿದೆ.
ತುಂಬೆ ವೆಂಟೆಡ್ ಡ್ಯಾಂನ ಜತೆಗೆ ಎಎಂಆರ್ ಡ್ಯಾಂನಲ್ಲಿಯೂ ನೀರು ಇರುವುದರಿಂದ ಕುಡಿಯುವ ನೀರಿಗೆ ಈ ಬಾರಿ ಯಾವುದೇ ರೀತಿಯಲ್ಲಿ ತೊಂದರೆ ಆಗದು ಎಂಬ ಲೆಕ್ಕಾಚಾರ ಅಧಿಕಾರಿಗಳದ್ದು. ಹಾಗಾಗಿ ಸದ್ಯ ನೀರು ರೇಶನಿಂಗ್ ವ್ಯವಸ್ಥೆಯ ಬಗ್ಗೆ ಯಾವುದೇ ನಿರ್ಧಾರ ಕೈಗೊಳ್ಳ ಲಾಗಿಲ್ಲ ಎನ್ನುತ್ತಾರೆ ಅಧಿಕಾರಿಗಳು.
ಸಾಧಾರಣವಾಗಿ ಎಪ್ರಿಲ್- ಮೇ ತಿಂಗಳಲ್ಲಿ ಮುಂಗಾರು ಪೂರ್ವ ಮಳೆಯಾಗುವುದು ವಾಡಿಕೆ. ಅದರಂತೆ ಮಳೆಯಾದಲ್ಲಿ ತುಂಬೆ ಅಣೆಕಟ್ಟಿನಲ್ಲಿ ನೀರಿನ ಒಳ ಹರಿವು ಮತ್ತೆ ಆಗಲಿದೆ. ಮಳೆಯಾಗದಿದದ್ದಲ್ಲಿ ಇರುವ ನೀರನ್ನು ರೇಶನಿಂಗ್ ವ್ಯವಸ್ಥೆಯ ಮೂಲಕ ಮುಂಗಾರು ಮಳೆ ಆರಂಭವಾಗುವವರೆಗೆ (ಸಾಧಾರಣವಾಗಿ ಜೂನ್‌ನಲ್ಲಿ) ಹಂಚಿಕೆ ಮಾಡುವುದು ಅನಿವಾರ್ಯಗಬಹುದು. ಕಳೆದ ವರ್ಷವೂ ಬೇಸಿಗೆಯ ಆರಂಭದಲ್ಲಿಯೇ ರೇಶನಿಂಗ್ ವ್ಯವಸ್ಥೆಯ ಮೂಲಕ ನೀರು ಪೂರೈಕೆಗೆ ಜಿಲ್ಲಾಡಳಿತ ಮನಪಾಕ್ಕೆ ಸೂಚನೆ ನೀಡಿದ ಕಾರಣ ನಗರಕ್ಕೆ ನೀರಿನ ಸಮಸ್ಯೆ ಹೆಚ್ಚಾಗಿ ಬಾಧಿಸಿರಲಿಲ್ಲ.
‘‘ಸದ್ಯಕ್ಕೆ ರೇಶನಿಂಗ್ ಅಗತ್ಯ ಇದ್ದಂತೆ ಇಲ್ಲ. ಸದ್ಯ ಎಎಂಆರ್ ಡ್ಯಾಂನಲ್ಲಿಯೂ ನೀರಿನ ಸಂಗ್ರಹವಿದೆ. ಹಾಗಾಗಿ ಮುಂದಿನ ವಾರ ಎಎಂಆರ್ ಡ್ಯಾಂನವರನ್ನು ಕರೆಸಿ ಚರ್ಚಿಸಿ ನೀರಿನ ಸಂಗ್ರಹದ ಬಗ್ಗೆ ಮಾಹಿತಿ ಪಡೆಯಲಾಗುವುದು. ಈ ನಡುವೆ ಮಳೆ ಬಂದಲ್ಲಿ ಖಂಡಿತಾ ನೀರಿಗೆ ತೊಂದರೆ ಆಗದು. ಹಾಗಿದ್ದರೂ, ರೇಶನಿಂಗ್ ಅಗತ್ಯವಿದ್ದಲ್ಲಿ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು’’
ಶಾನಾಡಿ ಅಜಿತ್ ಕುಮಾರ್ ಹೆಗ್ಡೆ, ಆಯುಕ್ತರು, ಮಂಗಳೂರು ಮಹಾನಗರ ಪಾಲಿಕೆ.







