'ಕೊರೋನ ಸೋಂಕು ನಿವಾರಣೆಯ ಮದ್ದು ಸಿಂಪಡಣೆ' ನಕಲಿ ಸುದ್ದಿ : ದ.ಕ. ಜಿಲ್ಲಾಡಳಿತ ಸ್ಪಷ್ಟನೆ

ಮಂಗಳೂರು, ಮಾ.18: ‘‘ಕೊರೋನ ಸೋಂಕು ಭೀತಿಯ ಹಿನ್ನೆಲೆ ಮಂಗಳೂರಿನಲ್ಲಿ ಸೋಂಕು ನಿವಾರಣೆಗಾಗಿ ಮದ್ದು ಸಿಂಪಡಣೆ ಮಾಡಲಾಗುತ್ತಿದೆ. ರಾತ್ರಿ 10ರಿಂದ ಬೆಳಗ್ಗೆ 5ರವರೆಗೆ ಯಾರೂ ಹೊರಬಾರದು’’ ಎಂಬ ಪೋಸ್ಟ್‌ವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇದು ನಕಲಿ ಪೋಸ್ಟ್ ಎಂದು ದ.ಕ. ಜಿಲ್ಲಾಡಳಿತವು ಬುಧವಾರ ಸಂಜೆ ಸ್ಪಷ್ಟಪಡಿಸಿದ್ದಾರೆ.
ಕೊರೋನಾ ಸೋಂಕಿನ ಬಗ್ಗೆ ಯಾವುದೇ ವದಂತಿ, ತಪ್ಪು ಮಾಹಿತಿ ಹರಡುವುದು ಶಿಕ್ಷಾರ್ಹ ಅಪರಾಧವಾಗಿದೆ. ಇದರಂತೆ, ಸಾಮಾಜಿಕ ಜಾಲತಾಣದಲ್ಲಿ ಕೊರೋನಾ ಸೋಂಕಿನ ಬಗ್ಗೆ ತಪ್ಪು ಮಾಹಿತಿ ಹರಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಜತೆಗೆ ನಕಲಿ ಪೋಸ್ಟ್‌ಗಳನ್ನು ಶೇರ್ ಮಾಡುವವರ ವಿರುದ್ಧವೂ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಡಳಿತ ತಿಳಿಸಿದೆ.
‘ಈಗಾಗಲೇ ಕೊರೋನ ಸೋಂಕು ಬಗ್ಗೆ ಸಾರ್ವಜನಿಕರಲ್ಲಿ ಗೊಂದಲ, ಆತಂಕ ಉಂಟು ಮಾಡುವ ತಪ್ಪುಮಾಹಿತಿ ಪ್ರಕಟಿಸಿದ ಕೆಲವು ವೆಬ್‌ಸೈಟ್‌ಗಳ ವಿರುದ್ಧ ಕ್ರಮ ಜರುಗಿಸಲು ಜಿಲ್ಲಾಧಿಕಾರಿಗೆ ವರದಿ ನೀಡಲಾಗಿದೆ’ ಎಂದು ಜಿಲ್ಲಾ ವಾರ್ತಾಧಿಕಾರಿ ಬಿ.ಎ. ಖಾದರ್ ಶಾ ತಿಳಿಸಿದ್ದಾರೆ.
ಸುಳ್ಳು ಸುದ್ದಿ ನಂಬಬೇಡಿ: ಶಾಸಕ ಕಾಮತ್
‘ಕೊರೋನ ಸೋಂಕಿನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ನಕಲಿ ಸುದ್ದಿಗಳು ಹರಿದಾಡುತ್ತಿದ್ದು, ಇವುಗಳ ಬಗ್ಗೆ ಯಾರೂ ಭಯಪಡುವ ಅಗತ್ಯವಿಲ್ಲ. ಇಂತಹ ಸುಳ್ಳು ಸುದ್ದಿಗಳನ್ನು ನಂಬಲೇಬಾರದು. ಸಾಧ್ಯವಾದರೆ ಮಂಗಳೂರಿಗರು ಮನೆಯಲ್ಲಿಯೇ ಇರಬೇಕು. ಜನತೆಯು ಸುರಕ್ಷತೆಗೆ ಗಮನ ನೀಡಬೇಕು. ಕೆಮ್ಮು, ಶೀತ, ಜ್ವರ ಕಂಡುಬಂದಲ್ಲಿ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು’ ಎಂದು ಶಾಸಕ ವೇದವ್ಯಾಸ ಕಾಮತ್ ತಮ್ಮ ಅಧಿಕೃತ ಫೇಸ್‌ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.







