‘ಮಾಸ್ಕ್, ಹ್ಯಾಂಡ್‌ಸ್ಯಾನಟೈಸರ್‌ಗೆ ಹೆಚ್ಚು ದರ ಪಡೆದರೆ ಕ್ರಮ’
ಉಡುಪಿ, ಮಾ.18: ಜಿಲ್ಲೆಯಲ್ಲಿ ಸಾರ್ವಜನಿಕರು ಕೊರೋನ ವೈರಸ್ (ಕೋವಿಡ್-19)ಭೀತಿಯಲ್ಲಿದ್ದು, ಸಾರ್ವಜನಿಕರಿಗೆ ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ಹಲವಾರು ಮಾಸ್ಕ್, ಹ್ಯಾಂಡ್ ಸ್ಯಾನಟೈಸರ್‌ನಂತಹ ಉಪಯುಕ್ತ ವಸ್ತುಗಳನ್ನು ಬಳಸಲು ಸಲಹೆ ನೀಡಲಾಗುತ್ತಿದೆ.
ಆದರೆ ಈ ಸಂದರ್ಭವನ್ನು ಔಷಧಿ ಅಂಗಡಿ ಮಾಲಕರು ದುರುಪಯೋಗ ಪಡಿಸಿಕೊಂಡು ಇವುಗಳನ್ನು ಹೆಚ್ಚಿನ ದರಗಳಿಗೆ ಮಾರಾಟ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಅಲ್ಲದೇ ಈ ವಸ್ತುಗಳನ್ನು ನಿಯಮಬಾಹಿರವಾಗಿ ದಾಸ್ತಾನು ಇರಿಸಿ ಕೃತಕ ಅಭಾವವನ್ನು ಸೃಷ್ಟಿಸಿ ಈ ವಸ್ತುಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಅಕ್ರಮ ಲಾಭ ಪಡೆಯಲು ಹವಣಿಸುತ್ತಿರುವುದು ಗಮನಕ್ಕೆ ಬಂದಿದೆ. ಅಲ್ಲದೇ ಔಷಧ ಅಂಗಡಿಗಳಲ್ಲಿ ಕೆಮ್ಮು, ಸೀನು ಇರುವ ಸಿಬ್ಬಂದಿಗಳು ಮಾಸ್ಕ್ ಧರಿಸದೇ ಗ್ರಾಹಕರಿಗೆ ಔಷಧಿ ಮಾರಾಟ ಮಾಡುತ್ತಿರುವ ದೂರುಗಳು ಸಹ ಬಂದಿವೆ.
ಇಂಥ ಕೃತ್ಯಗಳಿಂದ ಈ ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ನಡೆಸುತ್ತಿ ರುವ ಪ್ರಯತ್ನಗಳಿಗೆ ಹಿನ್ನೆಡೆಯಾಗುತ್ತಿದ್ದು, ಆದ್ದರಿಂದ ಈ ತೆರನಾದ ಯಾವುದೇ ಚಟುವಟಿಕೆ ನಡೆಸದಂತೆ ತಿಳುವಳಿಕೆ ನೀಡಿದೆ. ತಪ್ಪಿದಲ್ಲಿ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ಸಹ ಜಿಲ್ಲಾಧಿಕಾರಿ ಜಿ. ಜಗದೀಶ್ ನೀಡಿದ್ದಾರೆ.
ಅಗತ್ಯವಿದ್ದರೆ ತುರ್ತು ಸೇವೆಗೆ ಶುಲ್ಕ ರಹಿತ ಸಂಖ್ಯೆ: 1077, ದೂರವಾಣಿ ಸಂಖ್ಯೆ: 0820-2574802ನ್ನು ಸಂಪರ್ಕಿಸುವಂತೆ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







