ಕೌಟುಂಬಿಕ ಕಲಹದಿಂದ ಬೇಸತ್ತ ಮಕ್ಕಳ ರಕ್ಷಣೆ
ಉಡುಪಿ, ಮಾ.18: ಬಾಗಲಕೋಟೆ ಮೂಲದ ವಲಸೆ ಕಾರ್ಮಿಕ ಯಮನೂರ ಎಂಬವನು ತಾಯಿ , ಅಣ್ಣ ಹಾಗೂ 4 ವರ್ಷದ ಮಗಳು ಹಾಗೂ 11 ವರ್ಷದ ಸೊಸೆಯೊಂದಿಗೆ ಮಂಚಿಕೆರೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಮಂಗಳವಾರ ಕುಡಿದ ಮತ್ತಿನಲ್ಲಿ ಮಗಳಿಗೆ ಮನಬಂದಂತೆ ಹೊಡೆದಿದ್ದಾನೆ.
ಈ ಬಗ್ಗೆ ಮಕ್ಕಳ ಸಹಾಯವಾಣಿಗೆ ದೂರು ಬಂದಿದ್ದು, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಮನೆಗೆ ಭೇಟಿ ನೀಡಿ ಮಕ್ಕಳನ್ನು ವಿಚಾರಿಸಿದಾಗ ತಂದೆಯಿಂದ ಆದ ಹಿಂಸೆ ಬಗ್ಗೆ ಮಕ್ಕಳು ವಿವರಿಸಿದ್ದು, ಮಕ್ಕಳ ಹಿತ ದೃಷ್ಟಿಯಿಂದ ಅವರನ್ನು ತಾತ್ಕಾಲಿಕವಾಗಿ ಬಾಲಕಿಯರ ಬಾಲಮಂದಿರಕ್ಕೆ ದಾಖಲಿಸುವುದು ಸೂಕ್ತವೆಂದು ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ರೊನಾಲ್ಡ್ ಪುರ್ಟಾಡೋ ಅವರಿಗೆ ಮಾಹಿತಿ ನೀಡಿ ಇಬ್ಬರು ಮಕ್ಕಳನ್ನು ಬಾಲಕಿಯರ ಬಾಲಮಂದಿರ ನಿಟ್ಟೂರು ಇಲ್ಲಿ ಪುನರ್ವಸತಿ ಕಲ್ಪಿಸಲಾಗಿದೆ.
ಈ ಬಗ್ಗೆ ಮಣಿಪಾಲ ಠಾಣೆಯ ಸಬ್ ಇನ್ಸ್‌ಪೆಕ್ಟರ್‌ಗೆ ಘಟನೆ ಬಗ್ಗೆ ಮಾಹಿತಿ ನೀಡಲಾಗಿದೆ. ಕಾರ್ಯಾಚರಣೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಮಕ್ಕಳ ರಕ್ಷಣಾಧಿಕಾರಿ ಸದಾನಂದ ನಾಯಕ್, ಕಾನೂನು ಪರಿವೀಕ್ಷಣಾಧಿಕಾರಿ ಪ್ರಭಾಕರ ಆಚಾರ್, ಆಪ್ತ ಸಮಾಲೋಚಕಿ ಅಂಬಿಕಾ, ಮಕ್ಕಳ ಸಹಾಯವಾಣಿಯ ವೃಷಕ್, ಜ್ಯೋತಿ ಭಾಗವಹಿಸಿದ್ದರು.





