ಕೊರೋನ ಭೀತಿ: ಗೋವಾ, ಮುಂಬೈ ಸೇರಿ ಹಲವೆಡೆಗೆ ಕೆಎಸ್ಸಾರ್ಟಿಸಿ ಬಸ್ ಸಂಚಾರ ಬಂದ್

ಸಾಂದರ್ಭಿಕ ಚಿತ್ರ
ಬೆಂಗಳೂರು, ಮಾ.18: ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ಕೇರಳ, ಗೋವಾ, ಮುಂಬೈ, ಪುಣೆ, ಶಿರಡಿ, ಕುಕ್ಕೆ, ಧರ್ಮಸ್ಥಳ, ತಮಿಳುನಾಡು, ಹೈದರಾಬಾದ್ ಸೇರಿದಂತೆ ಹಲವು ಮಾರ್ಗಗಳಲ್ಲಿ ಬಸ್ ಸಂಚಾರವನ್ನು ಕೆಎಸ್ಸಾರ್ಟಿಸಿ ರದ್ದು ಪಡಿಸಿದೆ.
ರಾಜ್ಯದಲ್ಲಿ ಕೊರೋನ ಸೋಂಕು ಪತ್ತೆಯಾದಾಗಿನಿಂದ ಇಲ್ಲಿಯವರೆಗೂ ಕೆಎಸ್ಸಾರ್ಟಿಸಿ ಸಂಸ್ಥೆಗೆ ಒಟ್ಟು 6.69 ಕೋಟಿ ರೂ. ನಷ್ಟವಾಗಿದೆ. ಕೊರೋನ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ಜಾರಿ ಮಾಡಿದ್ದು, ಹವಾನಿಯಂತ್ರಿತ ಬಸ್ಸುಗಳ ತಾಪಮಾನವನ್ನು 25-25 ಸೆಂಟಿಗ್ರೇಡ್ಗೆ ನಿಗದಿಗೊಳಿಸಲಾಗಿದೆ. ಹಾಗೂ ಪ್ರತಿದಿನ ಬಸ್ಸುಗಳ ಸ್ವಚ್ಛತೆ ಮಾಡಲಾಗುತ್ತಿದೆ.
ಎಲ್ಲ ಬಸ್ಸುಗಳಲ್ಲೂ ಸಾನಿಟೈಝರ್ ಮತ್ತು ಇತರೆ ಅವಶ್ಯಕ ವಸ್ತುಗಳು ಇರಿಸುವಂತೆ ಕಡ್ಡಾಯ ಮಾಡಲಾಗಿದೆ. ಇಂದಿನಿಂದಲೇ ಕೆಎಸ್ಸಾರ್ಟಿಸಿಯ ಪ್ರತಿಷ್ಠಿತ ಬಸ್ಸುಗಳಲ್ಲಿ ಕೊಡಲಾಗುವ ಬೆಡ್ಶೀಟ್ ತಾತ್ಕಾಲಿಕವಾಗಿ ರದ್ದುಪಡಿಸಲಾಗಿದೆ. ಸಾರ್ವಜನಿಕರು ನಿಗಮದ ಕಚೇರಿ ಭೇಟಿಗೆ ಮಧ್ಯಾಹ್ನ 3ರಿಂದ 4ಕ್ಕೆ ನಿಗದಿ ಪಡಿಸಲಾಗಿದೆ. ಹಾಗೂ ಚಾಲಕ, ನಿರ್ವಾಹಕರ ನೇಮಕಾತಿಗಾಗಿ ಅರ್ಜಿ ಸಲ್ಲಿಕೆ ದಿನವನ್ನು ಮಾ.30ರವರೆಗೆ ವಿಸ್ತರಿಸಲಾಗಿದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.





