ಕೊರೋನ ವೈರಸ್‌ನಿಂದ ದಿಢೀರ್ ಸಾವು ಸಂಭವಿಸುವುದಿಲ್ಲ: ಆರೋಗ್ಯ ಸಚಿವ ಶ್ರೀರಾಮುಲು

ಬೆಂಗಳೂರು, ಮಾ.18: ಕೊರೋನ ವೈರಸ್‌ನಿಂದ ದಿಢೀರ್ ಸಾವು ಸಂಭವಿಸುವುದಿಲ್ಲ. ಈ ಬಗ್ಗೆ ಜನರು ಆತಂಕಗೊಳ್ಳುವ ಬದಲು, ಜಾಗೃತರಾದರೆ ಸಾಕು ಎಂದು ಆರೋಗ್ಯ ಸಚಿವ ಶ್ರೀರಾಮುಲು ಹೇಳಿದರು.
ಬುಧವಾರ ವಿಧಾನ ಪರಿಷತ್ತಿನ ಕಲಾಪದಲ್ಲಿ ಅವರು, ಶೇಕಡ 3ರಷ್ಟು ಮಾತ್ರ ಸಾವು ಸಂಭಿವಿಸುವ ಲಕ್ಷಣ ಈ ಕೊರೋನದಲ್ಲಿ ಇದೆ. ಆದರೆ, ಬೇರೆ ವೈರಸ್‌ಗಳಿಗಿಂತ ಇದು ಬೇಗ ಹರಡುವ ಭಯ ಇದ್ದು, ಈ ಬಗ್ಗೆ ಅರಿವು ಎಲ್ಲರಲ್ಲೂ ಬರಬೇಕೆಂದು ಅವರು ತಿಳಿಸಿದರು.
ಸದ್ಯ ನಮ್ಮ ದೇಶದಲ್ಲಿ ಕೊರೋನ 2ನೆ ಹಂತದಲ್ಲಿದೆ. ಇದು 3 ಮತ್ತು 4ನೇ ಹಂತಕ್ಕೆ ತಲುಪಿದರೆ, ಯಾವ ರೀತಿ ಪರಿಣಾಮ ಬೀರುತ್ತದೆ ಎನ್ನುವ ಬಗ್ಗೆ ಮಾಹಿತಿಯೇ ಇಲ್ಲ. ಹೀಗಾಗಿ, ಸರಕಾರ 2ನೇ ಹಂತದಲ್ಲಿಯೇ ಅಗತ್ಯ ಕ್ರಮ ಕೈಗೊಳ್ಳುತ್ತಿದೆ. ಜೊತೆಗೆ, ಸಾರ್ವಜನಿಕರು ಸ್ಪಂದಿಸಬೇಕು ಎಂದು ಅವರು ತಿಳಿಸಿದರು.
ಗಡಿಯಲ್ಲಿ ಪರೀಕ್ಷೆ: ಹೊರರಾಜ್ಯಗಳಿಂದ ಕರ್ನಾಟಕಕ್ಕೆ ಪ್ರವೇಶಿಸುವ ಎಲ್ಲ ಗಡಿ ಭಾಗಗಳಲ್ಲೂ ಕಡ್ಡಾಯವಾಗಿ ಎಲ್ಲರೂ ಕೊರೋನ ವೈರಸ್ ಪತ್ತೆ ಪರೀಕ್ಷೆಗೆ ಒಳಗಾಗಬೇಕು. ಇನ್ನು ಮಂಗಳೂರಿಗೆ ಕೇರಳ ರಾಜ್ಯದಿಂದ ಬರುವವರ ಸಂಖ್ಯೆ ಹೆಚ್ಚಿದ್ದು, ಈ ಸಂಬಂಧ ಒಟ್ಟು 27 ಮಾರ್ಗಗಳಲ್ಲೂ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸುವಂತೆ ಸ್ಥಳೀಯ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಶ್ರೀರಾಮುಲು ಹೇಳಿದರು.





