ಪ್ರವಾಸೋದ್ಯಮ ಕಾಮಗಾರಿ ನಿರ್ವಹಿಸಿಲು ವಾಸ್ತುಶಿಲ್ಪಿಗಳನ್ನು ನೇಮಿಸಿ: ಜಿಲ್ಲಾಧಿಕಾರಿ ಜಿ.ಜಗದೀಶ್

ಉಡುಪಿ, ಮಾ.18: ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಕೈಗೊಳ್ಳುವ ವಿವಿಧ ಕಾಮಗಾರಿಗಳನ್ನು ಪ್ರವಾಸಿಗರನ್ನು ಆಕರ್ಷಿಸು ವಂತೆ ನೂತನವಾಗಿ, ವಿಭಿನ್ನ ವಿನ್ಯಾಸದಲ್ಲಿ ಯೋಜನೆ ಸಿದ್ದಪಡಿಸಲು ವಾಸ್ತುಶಿಲ್ಪಿಯೊಬ್ಬರನ್ನು ಜಿಲ್ಲಾ ಸಮಿತಿಯಲ್ಲಿ ನೇಮಿಸಿಕೊಂಡು ಅವರ ಮೂಲಕ ಜಿಲ್ಲೆಯ ಪ್ರವಾಸಿ ತಾಣಗಳು ರಾಜ್ಯ, ದೇಶ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಡುವಂತೆ ಅನುಷ್ಠಾನ ಗೊಳಿಸಲು ಜಿಲ್ಲಾಧಿಕಾರಿ ಜಿ. ಜಗದೀಶ್ ಸಲಹೆ ನೀಡಿದ್ದಾರೆ.
ಬುಧವಾರ ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಬೆಯನ್ನುದ್ದೇಶಿಸಿ ಮಾತನಾಡುತ್ತಾ ಅವರು ಈ ವಿಷಯ ತಿಳಿಸಿದರು.
ಜಿಲ್ಲೆಯ ಎಲ್ಲಾ ಬೀಚ್‌ಗಳು ಮತ್ತು ಪ್ರವಾಸೋದ್ಯಮ ಇಲಾಖೆಯ ಕಾಮಗಾರಿಗಳು ಏಕರೂಪದಲ್ಲಿ ನಿರ್ಮಾಣಗೊಂಡರೆ ಪ್ರವಾಸಿಗರಿಗೆ ಅಕರ್ಷಕ ವೆನಿಸುವುದಿಲ್ಲ. ಆದ್ದರಿಂದ ಹೊಸ ಕಾಮಗಾರಿಗಳನ್ನು ಸಿದ್ದಪಡಿಸುವುವಾಗ ವಾಸ್ತುಶಿಲ್ಪಿಗಳ ಸಲಹೆಯಂತೆ ವಿನೂತನ ರೀತಿಯಲ್ಲಿ ಆಕರ್ಷಕ ವಾಗಿ ಅವುಗಳನ್ನು ವಿನ್ಯಾಸಗೊಳಿಸುವಂತೆ ಅವರು ತಿಳಿಸಿದರು.
ಇದಕ್ಕಾಗಿ ಜಿಲ್ಲಾ ಪ್ರವಾಸೋದ್ಯಮ ಸಮಿತಿಯಲ್ಲಿ ವಾಸ್ತುಶಿಲ್ಪಿಯೊಬ್ಬರನ್ನು ನೇಮಿಸುವಂತೆ ಹಾಗೂ ಜಿಲ್ಲೆಯಲ್ಲಿರುವ ಎಲ್ಲಾ ಬೀಚ್‌ಗಳಿಗೆ ಬ್ಲೂ ಪ್ಲ್ಯಾಗ್ ಸರ್ಟಿಫಿಕೇಶನ್ ದೊರೆಯುವ ನಿಟ್ಟಿನಲ್ಲಿ ಕೈಗೊಂಡಿರುವ ಎಲ್ಲಾ ಕಾಮಗಾರಿ ಗಳನ್ನು ಮಾ.31ರೊಳಗೆ ಮುಕ್ತಾಯಗೊಳಿಸುವಂತೆ ಜಿಲ್ಲಾಧಿಕಾರಿ ತಿಳಿಸಿದರು.
2019-2020 ನೇ ಸಾಲಿನ ಕೆಟಿವಿಜಿ ಶಿಪಾರಸ್ಸುಗಳ ಅಡಿ ಬಿಡುಗಡೆಯಾದ ಕಾಮಗಾರಿಗಳ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಶೀರ್ಘ ಪೂರ್ಣ ಗೊಳಿಸುವಂತೆ ಅವರು ತಿಳಿಸಿದರು. ಈ ಬಾರಿಯ ರಾಜ್ಯ ಬಜೆಟ್‌ನಲ್ಲಿ ಕೋಸ್ಟಲ್ ಟೂರಿಸಂಗೆ ಹೆಚ್ಚಿನ ಅನುದಾನ ಹಣ ನೀಡಲಾಗಿದ್ದು, ಜಿಲ್ಲೆಯಲ್ಲಿ ಅಗತ್ಯ ಕಾಮಗಾರಿಗಳ ಕುರಿತು ಯೋಜನೆಗಳ ವಿವರ ಮತ್ತುಈ ಕಾಮಗಾರಿಗಳ ವೆಚ್ಚದ ಅಂದಾಜು ಪಟ್ಟಿಯನ್ನು ಶೀಘ್ರದಲ್ಲಿ ಸರಕಾರಕ್ಕೆ ಸಲ್ಲಿಸಬೇು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯ ಪ್ರವಾಸೋದ್ಯಮ ಟಾಸ್ಕ್ ಪೋರ್ಸ್ ಸಮಿತಿಯ ವರದಿಯ ಕರಡುಪ್ರತಿ ಸಿದ್ದಪಡಿಸಿ ಕೂಡಲೇ ಸಲ್ಲಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು.
ಜಿಲ್ಲೆಯಲ್ಲಿ 13 ಪ್ರವಾಸಿ ಟ್ಯಾಕ್ಸಿ ಅರ್ಜಿ ಆಯ್ಕೆಯಾಗಿದ್ದು, ಈ ವಾಹನಗಳ ಮೇಲೆ ಪ್ರವಾಸೋದ್ಯಮ ಇಲಾಖೆಯ ಸ್ಟಿಕ್ಕರ್ಸ್‌ಗಳನ್ನು ಕಡ್ಡಾಯವಾಗಿ ಅಳವಡಿಸುವಂತೆ ಇಲಾಖೆಗೆ ಸೂಚಿಸಿದ ಅವರು, ಕಾಪು ಬೀಚ್‌ನ ಟೆಂಡರ್ ಮುಕ್ತಾಯಗೊಂಡಿರುವುದರಿಂದ ಹೊಸದಾಗಿ ಟೆಂಡರ್ ಕರೆಯ ಬೇಕು ಹಾಗೂ ಇಲ್ಲಿನ ಶೌಚಾಲಯವನ್ನು ದುರಸ್ಥಿಗೊಳಿಸುವಂತೆ ತಿಳಿಸಿದರು.
ಪ್ರವಾಸಿ ಬೋಟ್ ಹಾಗೂ ಸಾಹಸ ಜಲಕ್ರೀಡೆ ಚಟುವಟಿಕೆಗಳನ್ನು ನಡೆಸಲು ಅರ್ಜಿ ಸಲ್ಲಿಸಿದವರಿಗೆ ಅನುಮತಿ ನೀಡಿದ ಅವರು, ಈ ಬೋಟ್‌ಗಳಿಗೆ ಅನುಮತಿ ಪಡೆದವರು ಯಾವುದೇ ಕಾರಣಕ್ಕೂ ಸಮುದ್ರದೊಳಗೆ ಹಾಗೂ ನಿಷೇಧಿತ ಪ್ರದೇಶವನ್ನು ಪ್ರವೇಶ ನೀಡದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಪ್ರವಾಸೋಧ್ಯಮ ಇಲಾಖೆ ಹಾಗೂ ಜಿಲ್ಲೆಯಲ್ಲಿ ಪ್ರವಾಸಿ ತಾಣಗಳ ಕುರಿತ ಮಾಹಿತಿಯನ್ನು ಪ್ರಚಾರಪಡಿಸಲು, ಸಾಮಾಜಿಕ ಜಾಲತಾಣಗಳಲ್ಲಿ ಕಾರ್ಯ ನಿರ್ವಹಿಸಲು ಪ್ರಮೋಷನ್ ಏಜನ್ಸಿಯನ್ನು ನೇಮಕ ಮಾಡಬೇಕು. ಹೋಮ್‌ಸ್ಟೇ ಮಾರ್ಗಸೂಚಿಯನ್ವಯ ಬರುವ ಅರ್ಜಿಗಳಿಗೆ ಮಾತ್ರ ಅನುಮತಿ ನೀಡಬೇಕು. ಟೂರಿಸ್ಟ್ ಗೈಡ್‌ಗಳಿಗೆ ಸೂಕ್ತ ತರಬೇತಿ ನೀಡಿ ಪ್ರವಾಸಿ ತಾಣಗಳಲ್ಲಿ ನಿಯೋಜಿಸಿ ಪ್ರವಾಸಿ ತಾಣಗಳ ಮಾಹಿತಿಯನ್ನು ಹೆಚ್ಚಿನ ಜನರಿಗೆ ತಲುಪಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಪ್ರವಾಸಿ ತಾಣಗಳ ಸ್ವಚ್ಚತೆ ವಿಚಾರದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ, ಸೈಂಟ್ ಮೇರಿಸ್ ದ್ವೀಪದಲ್ಲಿರುವ ಕಸವನ್ನು ಸ್ವಚ್ಚಗೊಳಿಸಿ, ಅಲ್ಲಿ ಮಳೆಗಾಲ ಆರಂಭಕ್ಕೂ ಮುನ್ನ ತೆಂಗಿನ ಸಸಿಗಳನ್ನು ನೆಡಬೇಕು. ಅಪಾಯ ಪ್ರದೇಶಗಳಲ್ಲಿ ಅಳವಡಿಸಿರುವ ಬೇಲಿಗಳನ್ನು ತೆರವುಗೊಳಿಸಿ ಅಪಾಯ ಮುನ್ಸೂಚನಾ ಬೋರ್ಡ್, ಪ್ಲ್ಯಾಗ್‌ಗಳನ್ನು ಅಳವಡಿಸಿ, ಬೇಲಿ ಅಳವಡಿಸುವ ಮೂಲಕ ಪ್ರವಾಸಿ ತಾಣಗಳ ಆಕರ್ಷಣೆಯನ್ನು ಹಾಳು ಗೆಡವದಂತೆ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಕಿರಣ್ ಪಡ್ನೇಕರ್, ಕುಂದಾಪುರ ಉಪ ವಿಬಾಗಾಧಿಕಾರಿ ರಾಜು, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಚಂದ್ರಶೇಖರ ನಾಯ್ಕ, ನಗರಸಭಾ ಪೌರಾಯುಕ್ತ ಆನಂದ ಕಲ್ಲೋಳಿಕರ್, ವಿವಿಧ ಇಲಾಖೆ ಗಳ ಅಧಿಕಾರಿಗಳು ಮತ್ತು ಜಿಲ್ಲೆಯ ಪ್ರಮುಖ ಪ್ರವಾಸ ಸಂಘಟನೆಗಳ ಸದಸ್ಯರು ಹಾಜರಿದ್ದರು.









