ಕೊರೋನ ಭೀತಿ: ತಮಿಳುನಾಡಿನ ತೋಟದಲ್ಲಿ ಕುಳಿತು ಕೆಲಸ ಮಾಡುತ್ತಿರುವ ಬೆಂಗಳೂರಿನ ಟೆಕ್ಕಿಗಳು !

ಸಾಂದರ್ಭಿಕ ಚಿತ್ರ
ಬೆಂಗಳೂರು, ಮಾ.18: ಮೊಬೈಲ್ ಆ್ಯಪ್ ಅಭಿವೃದ್ಧಿಪಡಿಸುವ ಬೆಂಗಳೂರಿನ ಕಂಪನಿಯೊಂದರ ಟೆಕ್ಕಿಗಳು ತಮಿಳುನಾಡಿನ ಹಳ್ಳಿಯೊಂದರ ತೆಂಗಿನ ತೋಟದಲ್ಲಿ ಕುಳಿತು ಕೆಲಸ ಮಾಡುತ್ತಿದ್ದು, ಕೊರೋನ ಸೋಂಕು ತಗುಲದಂತೆ ಎಚ್ಚರಿಕೆ ವಹಿಸಿದ್ದಾರೆ.
ಬೆಂಗಳೂರಿನ ಎಚ್ಎಸ್ಆಆರ್ ಲೇಔಟ್ ಮೂಲದ ಸ್ಟಾರ್ಟ್ಅಪ್ ಕಂಪೆನಿಯೊಂದು ತಮ್ಮ ಕಚೇರಿಯನ್ನು ಥೇಣಿ ಜಿಲ್ಲೆಯ ಗ್ರಾಮ ಪ್ರದೇಶಕ್ಕೆ ಸ್ಥಳಾಂತರಿಸಿದೆ. ಬೆಂಗಳೂರಿನಿಂದ ಸುಮಾರು 450 ಕಿಮೀ ದೂರ ಹೋಗಿ ಕೆಲಸ ಮಾಡುತ್ತಿರುವ ಈ ತಂಡ ಕೊರೋನ ಭೀತಿಯಿಂದ ಮುಕ್ತವಾಗಿದೆ. ಪ್ರಸ್ತುತ ಕಂಪೆನಿಯ ಸುಮಾರು 20 ಮಂದಿ ಟೆಕ್ಕಿಗಳು ಥೇಣಿಯಲ್ಲಿರುವ ತೋಟದಲ್ಲಿ ಕುಳಿತು ಕೆಲಸ ಮಾಡುತ್ತಿದ್ದಾರೆ. ಇನ್ನುಳಿದ ನೌಕರರು ಬೆಂಗಳೂರು ನಿವಾಸಿಗಳೇ ಆಗಿರುವುದರಿಂದ ಮನೆಯಲ್ಲೇ ಕುಳಿತು ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ, ಕಂಪನಿಯ ಸಹ ಸಂಸ್ಥಾಪಕರೊಬ್ಬರು ಅಮೆರಿಕಕ್ಕೆ ಹೋಗಿ ಅಲ್ಲಿಯೇ ಉಳಿದಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಕಂಪೆನಿಯ ಸಿಇಒ ಅರವಿಂದ ರಾಜು, 'ಕೊರೋನ ಸೋಂಕಿನ ಭೀತಿ ಮತ್ತು ಆತಂಕ ಇದ್ದುದರಿಂದ ಬೆಂಗಳೂರು ಬಿಟ್ಟು ನನ್ನ ಅಜ್ಜಿಯ ಊರಾದ ತಮಿಳುನಾಡಿನ ಥೇಣಿ ಜಿಲ್ಲೆಯ ಗ್ರಾಮ ಪ್ರದೇಶಗಳಿಗೆ ಬಂದಿದ್ದೇವೆ. ಇಲ್ಲಿ ಯಾರು ಮಾಸ್ಕ್ ಧರಿಸುವುದಿಲ್ಲ. ಉಸಿರಾಡಲು ಶುದ್ಧ ಗಾಳಿಯಿದೆ. ಹಾಗೂ ಕೊರೋನ ಭೀತಿಯೂ ಇಲ್ಲ' ಎಂದು ಪ್ರತಿಕ್ರಿಯಿಸಿದ್ದಾರೆ.
ಹೆಚ್ಚಿನ ಸಲ ಹೊಟೇಲ್ ಊಟ ತಿನ್ನುತ್ತಿದ್ದ ನಾವು ಈಗ ಸದಾ ಮನೆ ಊಟ ಸವಿಯುತ್ತಾ ಕೆಲಸ ಮಾಡಲು ಖುಷಿ ಆಗುತ್ತಿದೆ. ಪ್ರಾರಂಭದಲ್ಲಿ ಇಂಟರ್ನೆಟ್ ಸಿಗುತ್ತಿರಲಿಲ್ಲ. ಈಗ ಇಂಟರ್ನೆಟ್ ಸಿಗುವ ಜಾಗ ಗೊತ್ತು ಮಾಡಿಕೊಂಡಿದ್ದೇವೆ. ಎಳನೀರು ಕುಡಿಯುತ್ತಾ ಆಹ್ಲಾದಕರ ವಾತಾವರಣದಲ್ಲಿ ಕೆಲಸ ನಿರ್ವಹಿಸಲು ನನ್ನ ಸಹದ್ಯೋಗಿಗಳು ಉತ್ಸುಕರಾಗಿದ್ದಾರೆಂದು ಅವರು ಅಭಿಪ್ರಾಯಿಸಿದರು.







