ಕರ್ಣಾಟಕ ಬ್ಯಾಂಕಿನಿಂದ ಜೀವರಕ್ಷಕ ಉಪಕರಣಗಳ ಕೊಡುಗೆ

ಮಂಗಳೂರು, ಮಾ.18: ಕರ್ಣಾಟಕ ಬ್ಯಾಂಕ್ ವತಿಯಿಂದ ಸಾಮಾಜಿಕ ಕಳಕಳಿಯ ಭಾಗವಾಗಿ ಚಿಕ್ಕಮಗಳೂರು ಜಿಲ್ಲೆಯ ಕಳಸದ ‘ಕಾವೇರಿ ಸ್ಮರಣಾರ್ಥ ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆಯ ಅಂಬುಲೆನ್ಸ್’ಗೆ ಬೇಕಾದ 8.52 ಲಕ್ಷ ರೂ. ಮೌಲ್ಯದ ಜೀವರಕ್ಷಕ ಉಪಕರಣಗಳನ್ನು ಕೊಡುಗೆಯಾಗಿ ನೀಡಲಾಯಿತು.
ಮಂಗಳೂರು ಪ್ರಧಾನ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಬ್ಯಾಂಕಿನ ಮ್ಯಾನೇಜಿಂಗ್ ಡೈರೆಕ್ಟರ್ ಹಾಗೂ ಚೀಫ್ ಎಕ್ಸಿಕ್ಯೂಟಿವ್ ಆಫೀಸರ್ ಮಹಾಬಲೇಶ್ವರ ಎಂ.ಎಸ್. ಅವರು ಕಾವೇರಿ ಆಸ್ಪತ್ರೆಯ ಅಧ್ಯಕ್ಷ ಡಾ.ವಿಶ್ವನಾಥ ಪ್ರಭು ಅವರಿಗೆ ಉಪಕರಣಗಳ ಕಿಟ್‌ಗಳನ್ನು ಹಸ್ತಾಂತರಿಸಿದರು.
ಈ ಸಂದರ್ಭ ಮಾತನಾಡಿದ ಶ್ರೀಮಹಾಬಲೇಶ್ವರ ಎಂ.ಎಸ್., ಮಲೆನಾಡಿನ ಕೆಲವು ಗ್ರಾಮೀಣ ಭಾಗಗಳು ವೈದ್ಯಕೀಯ ಸೌಲಭ್ಯಗಳಿಂದ ವಂಚಿತವಾಗಿವೆ. ಜೀವರಕ್ಷಕ ಉಪಕರಣಗಳುಳ್ಳ ಸುಸಜ್ಜಿತ ಆ್ಯಂಬುಲೆನ್ಸ್ ಸಕಾಲದಲ್ಲಿ ಇಂತಹ ಗ್ರಾಮೀಣ ಭಾಗಗಳಿಗೆ ತಲುಪಿದರೆ ಹಲವರ ಪ್ರಾಣಗಳನ್ನು ಉಳಿಸಬಹುದಾಗಿದೆ ಎಂದರು.
ಗ್ರಾಮೀಣ ಭಾಗದ ಜನರ ಅಗತ್ಯತೆಯನ್ನು ಮನಗಂಡು ಸಾಮಾಜಿಕ ಕಳಕಳಿಯುಳ್ಳ ನಮ್ಮ ಬ್ಯಾಂಕು ಕಾವೇರಿ ಸ್ಮರಣಾರ್ಥ ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆಯ ಅಂಬುಲೆನ್ಸ್‌ಗೆ ಬೇಕಾದ ಅಗತ್ಯ ಜೀವರಕ್ಷಕ ಉಪಕರಣಗಳನ್ನು ಹಸ್ತಾಂತರಿಸುತ್ತಿರುವುದಕ್ಕೆ ಸಂತಸವೆನಿಸುತ್ತದೆ. ಇದು ಅಗತ್ಯವಿದ್ದವರಿಗೆಲ್ಲ ಆಪತ್ಕಾಲದಲ್ಲಿ ನೆರವಾಗಲಿ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಬ್ಯಾಂಕಿನ ಚೀಫ್ ಬಿಸಿನೆಸ್ ಆಫೀಸರ್ ಗೋಕುಲ್‌ದಾಸ ಪೈ, ಜನರಲ್ ಮ್ಯಾನೇಜರ್ ಚಂದ್ರಶೇಖರ ರಾವ್ ಬಿ., ಅಸಿಸ್ಟಂಟ್ ಜನರಲ್ ಮ್ಯಾನೇಜರ್ ರೇಣುಕಾ ಎನ್. ಬಂಗೇರಾ ಮತ್ತು ಮಂಗಳೂರಿನ ಹೃದ್ರೋಗ ತಜ್ಞ ಡಾ.ಪದ್ಮನಾಭ ಕಾಮತ್, ಕಾವೇರಿ ಆಸ್ಪತ್ರೆಯ ಅಧ್ಯಕ್ಷ ಡಾ.ವಿಶ್ವನಾಥ ಪ್ರಭು, ಆಸ್ಪತ್ರೆಯ ವೈದ್ಯ ಡಾ.ವಿಕ್ರಮ ಪ್ರಭು ಮತ್ತಿತರರು ಉಪಸ್ಥಿತರಿದ್ದರು.







