ಎಸ್‌ಎಸ್‌ಸಿ ನೇಮಕಾತಿ ಕಳೆದ 4 ವರ್ಷಗಳಲ್ಲಿ ಈ ವರ್ಷ ತೀವ್ರ ಇಳಿಕೆ
ಹೊಸದಿಲ್ಲಿ, ಮಾ. 18: ಕೇಂದ್ರ ಸರಕಾರದ ಅತಿ ದೊಡ್ಡ ಉದ್ಯೋಗ ನೇಮಕಾತಿ ಸಂಸ್ಥೆ ಸ್ಟಾಫ್ ಸೆಲಕ್ಷನ್ ಕಮಿಷನ್ (ಎಸ್‌ಎಸ್‌ಸಿ) ಕಳೆದ ನಾಲ್ಕು ವರ್ಷಗಳಲ್ಲಿ 2019-20ರಲ್ಲಿ ಅತಿ ಕಡಿಮೆ ಉದ್ಯೋಗ ನೇಮಕಾತಿ ಮಾಡಿದೆ.
ಖಾಲಿ ಇರುವ ಉದ್ಯೋಗದ ಬಗ್ಗೆ ಲೋಕಸಭೆ ಸದಸ್ಯ ಸಪ್ತಗಿರಿ ಶಂಕರ್ ಉಲಕ ಕೇಳಿದ ಪ್ರಶ್ನೆಗೆ ಕೇಂದ್ರ ಸರಕಾರ ಸಂಸತ್ತಿನಲ್ಲಿ ಬುಧವಾರ ಈ ಮಾಹಿತಿ ನೀಡಿತು. ನೇಮಕಾತಿ ಕುರಿತ ಸರಕಾರದ ಅಂಕಿ-ಅಂಶವನ್ನು ಸಚಿವ ಡಾ. ಜಿತೇಂದ್ರ ಸಿಂಗ್ ನೀಡಿದರು. ಈ ದತ್ತಾಂಶ ಯುಪಿಎಸ್‌ಸಿ, ಎಸ್‌ಎಸ್‌ಸಿ ಹಾಗೂ ರೈಲ್ವೆ ಸಚಿವಾಲಯ ಕಳೆದ ಐದು ವರ್ಷಗಳಲ್ಲಿ ನಿಯೋಜನೆಗೆ ಶಿಫಾರಸು ಮಾಡಿದ ಅಭ್ಯರ್ಥಿಗಳ ಸಂಖ್ಯೆಯನ್ನು ಒಳಗೊಂಡಿದೆ.
2014-2015ರಿಂದ ಎಸ್‌ಎಸ್‌ಸಿ 2.28,218 ನೇಮಕಾತಿಯನ್ನು ಸಂಪೂರ್ಣಗೊಳಿಸಿದೆ. ಈ ಐದು ವರ್ಷಗಳಲ್ಲಿ ಅತಿ ಕಡಿಮೆ ನಿಯೋಜನೆಯಾಗಿರುವುದು 2019-2020. ಈ ಅವಧಿಯಲ್ಲಿ ಆಯೋಗ 14.000ಕ್ಕಿಂತಲೂ ಕಡಿಮೆ ನೇಮಕಾತಿ ಮಾಡಿದೆ. ಗ್ರೂಪ್ ಬಿ ಹಾಗೂ ನಾನ್ ಟೆಕ್ನಿಕಲ್ ಗ್ರೂಪ್ ಸಿ ಹುದ್ದೆಗಳಿಗೆ ನೇಮಕಾತಿಗೆ ಇತರ ಸಂಸ್ಥೆಗಳಂತೆ ಎಸ್‌ಎಸ್‌ಸಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಏರ್ಪಡಿಸುತ್ತದೆ. ಪ್ರಸ್ತುತ ಎಸ್‌ಎಸ್‌ಸಿ ನೇಮಕಾತಿಯಲ್ಲಿ ಹಿಂದುಳಿದಿದೆ.
2018 ಹಾಗೂ 2019ರ ಕೆಲವು ನೇಮಕಾತಿ ಇದುವರೆಗೆ ಪೂರ್ಣಗೊಂಡಿಲ್ಲ. ಉದಾಹರಣೆಗೆ ಎಸ್ ಸಿ ಜಿಎಲ್ 2018ರ ನೇಮಕಾತಿ ಇನಷ್ಟೇ ಪೂರ್ಣಗೊಳ್ಳಬೇಕು. ಈ ಪರೀಕ್ಷೆ ಮೂಲಕ 11,271 ಹುದ್ದೆಗಳಿಗೆ ನೇಮಕಾತಿ ಆಗಬೇಕು. ಸಿಜಿಎಲ್ 2017ನ ಅಂತಿಮ ಫಲಿತಾಂಶವನ್ನು 2019 ನವೆಂಬರ್‌ನಲ್ಲಿ ಪ್ರಕಟಿಸಲಾಗಿತ್ತು. ಎಪ್ರಿಲ್‌ನಲ್ಲಿ ಪ್ರಕಟಿಸಿದ ವೇಳಾಪಟ್ಟಿಯ ಪ್ರಕಾರ ಆಯೋಗ 2020ರ ಮೊದಲ ನೇಮಕಾತಿಯ ಘೋಷಣೆಯನ್ನು ಇದುವರೆಗೆ ಮಾಡಿಲ್ಲ. 2017ರಲ್ಲಿ ಸಿಜಿಎಲ್ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಬಳಿಕ ಎಸ್‌ಎಸ್‌ಸಿಗೆ ತೀವ್ರ ಹಿನ್ನಡೆ ಉಂಟಾಗಿತ್ತು.







