ಕಾಂಗ್ರೆಸ್ ಶಾಸಕರನ್ನು ಒಳ್ಳೆಯ ಬೆಲೆಗೆ ಖರೀದಿ ಮಾಡುತ್ತಾರೆ: ಎಸ್.ಆರ್.ಪಾಟೀಲ್

ಬೆಂಗಳೂರು, ಮಾ.18: ಮಧ್ಯಪ್ರದೇಶದ ಆಪರೇಷನ್ ಕಮಲದ ರಾಜಕೀಯ ಬೆಳವಣಿಗೆಗಳು ಮೇಲ್ಮನೆಯಲ್ಲಿ ಸದ್ದು ಮಾಡಿದ್ದು, ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ್ ಸಂವಿಧಾನದ ಮೇಲಿನ ಚರ್ಚೆ ವೇಳೆ, ಕಾಂಗ್ರೆಸ್ಸಿನ ಶಾಸಕರನ್ನು ಒಳ್ಳೆಯ ಬೆಲೆಗೆ ಖರೀದಿ ಮಾಡುತ್ತಾರೆ ಅಂತೆ, ಇದು ಪ್ರಜಾಪ್ರಭುತ್ವಕ್ಕೆ ಮಾರಕವಾದದ್ದು ಎಂದು ವಾಗ್ದಾಳಿ ನಡೆಸಿದರು.
ಬುಧವಾರ ವಿಧಾನ ಪರಿಷತ್ತಿನ ಕಲಾಪದಲ್ಲಿ ಅವರು, ಮಧ್ಯಪ್ರದೇಶ ಕಾಂಗ್ರೆಸ್ ಶಾಸಕರು ಬೆಂಗಳೂರಿನಲ್ಲಿದ್ದಾರೆ. ಸಾವಿರಾರು ಕೋಟಿ ತಂದು ಸ್ಥಿರವಾಗಿರುವ ಸರಕಾರವನ್ನು ಬೀಳಿಸಿ ಮತ್ತೊಂದು ಸರಕಾರ ರಚನೆ ಮಾಡುವ ಮಟ್ಟಕ್ಕೆ ಇವತ್ತು ತಲುಪಿದ್ದೇವೆ. ಇದು ಪ್ರಜಾತಂತ್ರ ವ್ಯವಸ್ಥೆಗೆ ಕಪ್ಪು ಚುಕ್ಕೆ. ಪ್ರತಿ ಚುನಾವಣೆಯಿಂದ ಚುನಾವಣೆಗೆ ಹಣವಂತರು, ಕ್ರಿಮಿನಲ್ ಹಿನ್ನೆಲೆಯವರು, ರಿಯಲ್ ಎಸ್ಟೇಟ್‌ನಲ್ಲಿ ತೊಡಗಿರುವವರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಇದು ಹೀಗೆಯೇ ಮುಂದುವರಿದರೆ ಕೋಟ್ಯಧಿಪತಿಗಳೇ ಸದನದಲ್ಲಿ ಇರಲಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ರಾಜಕಾರಣ ವೈರಸ್: ಈ ವೇಳೆ ಮಧ್ಯಪ್ರವೇಶ ಮಾಡಿದ ಮಾಜಿ ಸಚಿವ ಸಿ.ಎಂ. ಇಬ್ರಾಹಿಂ, ಒಂದು ರೀತಿಯಲ್ಲಿ ರಾಜಕಾರಣಕ್ಕೆ ವೈರಸ್ ಹಿಡಿದಿದೆ. ಬಡವನ ಮಗ, ಮರ್ಯಾದಸ್ಥರು ರಾಜಕಾರಣಕ್ಕೆ ಬಾರದ ಸ್ಥಿತಿ ಇದೆ. ಇದು ಹೀಗೆಯೇ ಆದರೆ ದೇಶ ಮತ್ತಷ್ಟು ಹಾಳಾಗಲಿದೆ ಅಂತ ಅಸಮಾಧಾನ ಹೊರ ಹಾಕಿದರು. ಅಲ್ಲದೇ ಹಿಂದೆ ನಿಜಲಿಂಗಪ್ಪ ಬಳಿ ಸ್ವಂತ ಕಾರು ಇರಲಿಲ್ಲ. ಜಗನ್ನಾಥರಾವ್ ಜೋಷಿ ಬಳಿ ಚಿಕಿತ್ಸೆಗೆ ಹಣ ಇರಲಿಲ್ಲ ಎಂದು ಉದಾಹರಣೆ ಕೊಟ್ಟರು.
ಮತ್ತೆ ಮಾತು ಮುಂದುವರಿಸಿದ ಎಸ್.ಆರ್.ಪಾಟೀಲ್, ಇವತ್ತಿನ ರಾಜಕಾರಣದಲ್ಲಿ ಆಯಾ ರಾಮ್ ಗಯಾ ರಾಮ್ ಹೆಚ್ಚಾಗುತ್ತಿದೆ. ಗೆದ್ದ ಮೇಲೆ ಪಕ್ಷ ಬದಲಾವಣೆ ಮಾಡುತ್ತಾರೆ. ನಮ್ಮ ಕಡೆ ಇದನ್ನು ಗೋಸುಂಬೆ ಅಂತ ಕರೆಯುತ್ತಾರೆ ಎಂದು ಆಕ್ರೋಶ ಹೊರ ಹಾಕಿದರು. ಆಸೆ, ಆಮಿಷಕ್ಕೆ ಒಳಗಾಗಿ ಪಕ್ಷಾಂತರ ಮಾಡುವುದು ಯಾರಿಗೆ ಪ್ರಯೋಜನ ಆಗಲಿದೆ ಎಂದು ಟೀಕಿಸಿದರು.
ಮಧ್ಯಪ್ರದೇಶದ ಶಾಸಕರು ಇಲ್ಲಿಗೆ ಬಂದಿದ್ದಾರೆ. ನಮ್ಮವರು ಮುಂಬೈಗೆ ಹೋಗಿದ್ದರು ಎನ್ನುತ್ತಿದ್ದಂತೆ ಗುಜರಾತ್‌ನಿಂದಲೂ ಬಂದಿದ್ದರು ಎಂದು ಬಿಜೆಪಿ ಸದಸ್ಯರು ಕಾಂಗ್ರೆಸ್ ಸದಸ್ಯರ ಕಾಲೆಳೆದರು. ಇದಕ್ಕೆ ವಿರೋಧ ವ್ಯಕ್ತಪಡಿಸಿ ಎಸ್.ಆರ್. ಪಾಟೀಲ್ ಹಣ, ಅಧಿಕಾರದ ಆಸೆಗೆ ಶಾಸಕರು ಬಲಿಯಾಗುತ್ತಿದ್ದಾರೆ. ಸ್ಟ್ಯಾಂಡರ್ಡ್ ರೇಟ್ ಫಿಕ್ಸ್ ಮಾಡಿದ್ದಾರಂತೆ. ಹೀಗೆ ಆದರೆ ಪ್ರಜಾಪ್ರಭುತ್ವ ಉಳಿಯೋದಿಲ್ಲ ಎಂದು ಆರೋಪಿಸಿದರು.







