ಕೇಂದ್ರದಿಂದ ಅನ್ಯಾಯವಾಗುತ್ತಿದ್ದರೆ ಬಾಯಿ ಮುಚ್ಚಿ ಕೂತಿದ್ದಾರೆ: ಬಿಜೆಪಿ ನಾಯಕರ ವಿರುದ್ಧ ಸಿದ್ದರಾಮಯ್ಯ ಕಿಡಿ

ಬೆಂಗಳೂರು, ಮಾ.18: ಮುಖ್ಯಮಂತ್ರಿ ಯಡಿಯೂರಪ್ಪ ಮಂಡಿಸಿರುವ 2020-21ನೆ ಸಾಲಿನ ಬಜೆಟ್ ಬದ್ಧತೆ, ಗುರಿಯಿಲ್ಲದ, ರಾಜ್ಯದ ಅಭಿವೃದ್ಧಿಗೆ ಪೂರಕವಲ್ಲದ ಬಜೆಟ್ ಆಗಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.
ಬುಧವಾರ ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಅವರು, ಬಿಜೆಪಿಯವರೆಲ್ಲ ಕೇಸರಿ ಶಾಲು ಹಾಕಿಕೊಂಡರೆ, ಯಡಿಯೂರಪ್ಪ ಮಾತ್ರ ಪ್ರಮಾಣ ವಚನ ಸ್ವೀಕಾರ, ಬಜೆಟ್ ಮಂಡನೆ ವೇಳೆ ಹಸಿರು ಶಾಲು ಹಾಕಿಕೊಳ್ಳುತ್ತಾರೆ. ಆದರೆ, ಈ ಬಜೆಟ್ ನೋಡಿದ ಮೇಲೆ ಆ ಹಸಿರು ಶಾಲಿನಲ್ಲೂ ಕೇಸರಿ ಶಾಲು ಇದೆ ಎಂದೆನಿಸುತ್ತಿದೆ ಎಂದರು.
2,37,893 ಕೋಟಿ ರೂ.ಗಳ ಬಜೆಟ್ ಅನ್ನು ಮಂಡಿಸಿದ್ದಾರೆ. ಆದರೆ, ಪರಿಷ್ಕೃತ ಬಜೆಟ್‌ನಲ್ಲಿ ಈ ಮೊತ್ತ 2,26,625 ಕೋಟಿ ರೂ.ಗಳಿಗೆ ಇಳಿದಿದೆ. 2019-20ನೆ ಸಾಲಿನ ಬಜೆಟ್ 2,34,152 ಕೋಟಿ ರೂ.ಗಳಷ್ಟಿತ್ತು ಎಂದು ಅವರು ಹೇಳಿದರು.
2019-20ನೆ ಸಾಲಿನಲ್ಲಿ ಕೇಂದ್ರ ಸರಕಾರದಿಂದ 3 ಸಾವಿರ ಕೋಟಿ ರೂ.ಜಿಎಸ್‌ಟಿ ಪರಿಹಾರ ಸೇರಿದಂತೆ ಒಟ್ಟಾರೆ 11,887 ಕೋಟಿ ರೂ.ಬಂದಿಲ್ಲ. ನನ್ನ ಮಾಹಿತಿ ಪ್ರಕಾರ ತೆರಿಗೆ ಸಂಗ್ರಹದಲ್ಲಿಯೂ 4-5 ಸಾವಿರ ಕೋಟಿ ರೂ.ಕಡಿಮೆಯಾಗಿದೆ ಎಂದು ಅವರು ಹೇಳಿದರು.
14ನೆ ಹಣಕಾಸು ಆಯೋಗದಲ್ಲಿ ನಮ್ಮ ರಾಜ್ಯಕ್ಕೆ ಶೇ.4.7ರಷ್ಟು ಹಂಚಿಕೆ ಇತ್ತು. ಆದರೆ, 15ನೆ ಹಣಕಾಸು ಆಯೋಗದಲ್ಲಿ ಈ ಪ್ರಮಾಣವನ್ನು ಶೇ.3.64ಕ್ಕೆ ಇಳಿಸಲಾಗಿದೆ. ನಮ್ಮ ರಾಜ್ಯದಿಂದ ಸಂಗ್ರಹವಾಗುವ ತೆರಿಗೆ ಪಾಲಿನಲ್ಲಿ ಶೇ.42ರಷ್ಟು ಹಂಚಿಕೆಯಾಗುತ್ತಿತ್ತು. ಇದೀಗ, ಜಮ್ಮು ಕಾಶ್ಮೀರ, ಲಡಾಕ್ ಹೊಸ ರಾಜ್ಯಗಳ ರಚನೆಯ ನೆಪ ಹೇಳಿ ಅದನ್ನು ಶೇ.41ಕ್ಕೆ ಇಳಿಸಿದ್ದಾರೆ ಎಂದು ಸಿದ್ದರಾಮಯ್ಯ ಟೀಕಿಸಿದರು.
15ನೆ ಹಣಕಾಸು ಆಯೋಗದಲ್ಲಿ ಬಿಹಾರ ರಾಜ್ಯಕ್ಕೆ ಶೇ.10, ಉತ್ತರಪ್ರದೇಶಕ್ಕೆ ಶೇ.17ರಷ್ಟು ಹಂಚಿಕೆಯಾಗಿದೆ. ದೇಶದಲ್ಲಿ ತೆರಿಗೆ ಸಂಗ್ರಹದಲ್ಲಿ ಎರಡನೆ ಸ್ಥಾನದಲ್ಲಿದ್ದೇವೆ, ಜಿಡಿಪಿಗೆ ಬಹುದೊಡ್ಡ ಕೊಡುಗೆ ನೀಡುತ್ತಿದ್ದೇವೆ. ಆರ್ಥಿಕ ನಿರ್ವಹಣೆಯಲ್ಲಿಯೂ ಉತ್ತಮ ಸ್ಥಿತಿಯಲ್ಲಿದ್ದೇವೆ. ಆದರೆ, ನಮಗೆ ಮಾತ್ರ ಅನ್ಯಾಯವಾಗುತ್ತಿದೆ ಎಂದು ಅವರು ಹೇಳಿದರು.
2021-22ರ ನಂತರ ನಾವು ಕಷ್ಟಕ್ಕೆ ಸಿಲುಕಿಕೊಳ್ಳುತ್ತೇವೆ ಎಂಬ ಆತಂಕವಿದೆ. ಜಿಎಸ್‌ಟಿ ನಷ್ಟ ತುಂಬಲು ಪರಿಹಾರ ಸಿಗುವುದಿಲ್ಲ. ಈಗಲೇ ಆದಾಯ ಹೆಚ್ಚಳಕ್ಕೆ ಪರ್ಯಾಯ ಮಾರ್ಗ ಹುಡುಕಬೇಕು. ಇಲ್ಲದಿದ್ದರೆ, ಸಂಬಳ, ಪಿಂಚಣಿ, ಬಡ್ಡಿ ಹೊರತುಪಡಿಸಿ, ಅಭಿವೃದ್ಧಿಗೆ ಒಂದು ರೂ.ಗಳು ಸಿಗುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
15ನೆ ಹಣಕಾಸು ಆಯೋಗವು ಕರ್ನಾಟಕಕ್ಕೆ 5495 ಕೋಟಿ ರೂ., ತೆಲಂಗಾಣ ರಾಜ್ಯಕ್ಕೆ 723 ಕೊಟಿ ರೂ. ಹಾಗೂ ಮಿರೆರಾಂ ರಾಜ್ಯಕ್ಕೆ 546 ಕೊಟಿ ರೂ.ವಿಶೇಷ ಅನುದಾನ ನೀಡುವಂತೆ ಶಿಫಾರಸ್ಸು ಮಾಡಿತ್ತು. ನಮ್ಮ ರಾಜ್ಯದಿಂದಲೆ ರಾಜ್ಯಸಭೆಗೆ ಆಯ್ಕೆಯಾಗಿ ಹೋಗಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಆ ಶಿಫಾರಸ್ಸು ತಿರಸ್ಕರಿಸಿದ್ದಾರೆ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೇ ಪಕ್ಷದ ಸರಕಾರ ಅಧಿಕಾರಕ್ಕೆ ಬಂದರೆ ಸ್ವರ್ಗ ಸೃಷ್ಟಿ ಮಾಡುತ್ತೇವೆ ಎಂದು ಭಾಷಣ ಮಾಡಿದ್ದೆ ಮಾಡಿದ್ದು ಬಿಜೆಪಿಯವರು. ಲೋಕಸಭಾ ಚುನಾವಣೆ, ವಿಧಾನಸಭೆಯ ಉಪ ಚುನಾವಣೆಯಲ್ಲಿ ಅತೀ ಹೆಚ್ಚು ಸ್ಥಾನ ಗೆದ್ದಿರುವುದರಿಂದ ಜನಾದೇಶ ನಮ್ಮ ಪರವಾಗಿದೆ ಎಂದರು. ಈಗ ನಮಗೆ ಕೇಂದ್ರ ಸರಕಾರದಿಂದ ಅನ್ಯಾಯವಾಗುತ್ತಿದ್ದರೆ ಬಾಯಿ ಮುಚ್ಚಿಕೊಂಡು ಕೂತಿದ್ದಾರೆ ಎಂದು ಅವರು ಕಿಡಿಗಾರಿದರು.
ರಾಜ್ಯದಿಂದ ಆಯ್ಕೆಯಾಗಿರುವ 25 ಸಂಸದರು ಹೋಗಿ ಅವರ ಮೇಲೆ ಒತ್ತಡ ಹಾಕಿ ಅನುದಾನವನ್ನು ಬಿಡುಗಡೆ ಮಾಡಿಸಬೇಕಲ್ಲವೇ? ಈ ವಿಶೇಷ ಅನುದಾನ ಪಡೆಯಲು ಸರ್ವಪಕ್ಷಗಳ ನಿಯೋಗ ಕರೆದುಕೊಂಡು ಹೋಗಿ, ನಿಮಗೆ ಅವರೊಂದಿಗೆ ಮಾತನಾಡಲು ಮುಜುಗರವಾದರೆ ನಾನು ಮಾತನಾಡುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದರು. ನೋಟು ಅಮಾನ್ಯೀಕರಣ, ಪೂರ್ವ ಸಿದ್ಧತೆ ಇಲ್ಲದೆ ಜಿಎಸ್‌ಟಿ ಹೇರಿಕೆಯಿಂದಾಗಿ ಉದ್ಯೋಗ ನಷ್ಟ, ಹೂಡಿಕೆದಾರರು ಬರುತ್ತಿಲ್ಲ, ಉದ್ಯೋಗ ಸೃಷ್ಟಿಯಾಗುತ್ತಿಲ್ಲ. ಉದ್ಯೋಗವಿಲ್ಲದೆ ಜನ ಖರ್ಚು ಮಾಡಲು ಸಾಧ್ಯವಾಗುತ್ತಿಲ್ಲ. ಐದು ಟ್ರಿಲಿಯನ್ ಆರ್ಥಿಕತೆ ಎಂದು ಪ್ರಧಾನಿ ಹೇಳಿದ್ದರು. ಈವರೆಗೆ ಎಷ್ಟು ಟ್ರಿಲಿಯನ್ ಆರ್ಥಿಕತೆಯಾಗಿದೆ ಎಂದು ಯಾರಿಗೂ ಗೊತ್ತಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.







