ದಯವಿಟ್ಟು ವಿದೇಶದಲ್ಲಿರುವ ನಮ್ಮ ಮಕ್ಕಳನ್ನು ರಕ್ಷಿಸಿ: ಸದನದಲ್ಲಿ ಸದಸ್ಯರಿಂದ ರಾಜ್ಯ ಸರಕಾರಕ್ಕೆ ಮನವಿ
ಕೊರೋನ ವೈರಸ್ ಭೀತಿ

ಬೆಂಗಳೂರು, ಮಾ.18: ಕೊರೋನ ವೈರಸ್‌ನಿಂದ ವಿದೇಶದಲ್ಲಿ ಕೆಟ್ಟ ಪರಿಸ್ಥಿತಿ ನಿರ್ಮಾಣವಾಗಿದ್ದು, ಅಲ್ಲಿ ಶಿಕ್ಷಣಕ್ಕೆಂದು ಹೋಗಿರುವ ನಮ್ಮ ಮಕ್ಕಳು, ಸ್ವದೇಶಕ್ಕೆ ವಾಪಸ್ಸು ಆಗಲು ಸಾಧ್ಯವಿಲ್ಲ. ದಯವಿಟ್ಟು, ರಾಜ್ಯ ಸರಕಾರ ನಮ್ಮ ಮಕ್ಕಳ ರಕ್ಷಣೆಗೆ ಮುಂದಾಗಿ ಎಂದು ಪಕ್ಷಭೇದ ಮರೆತು ಸದಸ್ಯರು ಮನವಿ ಮಾಡಿದರು.
ಬುಧವಾರ ವಿಧಾನ ಪರಿಷತ್ತಿನ ಕಲಾಪದಲ್ಲಿ ಕೊರೋನ ವೈರಸ್‌ನಿಂದ ರಾಜ್ಯದಲ್ಲಿ ಈವರೆಗೆ ಸರಕಾರ ಕೈಗೊಂಡ ಕ್ರಮಗಳ ಕುರಿತು ಆರೋಗ್ಯ ಸಚಿವ ಶ್ರೀರಾಮುಲು ಅವರು ಮಾಹಿತಿ ನೀಡಿದರು. ಈ ವೇಳೆ ಮಧ್ಯಪ್ರವೇಶಿಸಿದ ಮಾಜಿ ಸಚಿವೆ ಜಯಮಾಲಾ, ನನ್ನ ಪುತ್ರಿ ಲಂಡನ್ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಕ್ಕಿಕೊಂಡಿದ್ದಾಳೆ. ಈ ಬಗ್ಗೆ ಗಮನ ನೀಡಿ ಎಂದರು.
ಬಳಿಕ ವಿಧಾನ ಪರಿಷತ್ತಿನ ಬಿಜೆಪಿ ಸದಸ್ಯ ನಾರಾಯಣಸ್ವಾಮಿ, ನನ್ನ ಪುತ್ರ ಸಹಿತ ಪ್ಯಾರೀಸ್‌ನಲ್ಲಿ ಎಂಬಿಎ ವ್ಯಾಸಂಗಕ್ಕಾಗಿ ಹೋಗಿದ್ದಾನೆ. ಆದರೆ, ಅಲ್ಲಿ ನಿಷೇಧಾಜ್ಞೆ ಹೇರಲಾಗಿದೆ. ಊಟದ ವ್ಯವಸ್ಥೆಗೂ ಕಷ್ಟಕರ ಪರಿಸ್ಥಿತಿ ನಿರ್ಮಾಣ ಆಗಿದೆ ಎಂದು ನುಡಿದರು. ಇವತ್ತು ವಿದೇಶದಿಂದ ನನ್ನ ಮಗಳು ವಾಪಸ್ ಆಗಿದ್ದಾಳೆ ಎಂದು ಶ್ರೀಕಂಠೇಗೌಡ ಹಾಗೂ ಮರಿತಿಬ್ಬೇಗೌಡರು ಹೇಳಿದರು.
ಇದೇ ವೇಳೆ ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಮಾತನಾಡಿ, ವಿದೇಶದಲ್ಲಿರುವ ಭಾರತೀಯರಿಗೆ ಅಲ್ಲೆ ಉಳಿಯುವ ವ್ಯವಸ್ಥೆಯನ್ನು ಸರಕಾರ ಮಾಡಬೇಕು. ಬೇರೆ ಬೇರೆ ದೇಶಗಳು ಕೊರೋನ ವೈರಸ್ ಜಾಗೃತಿಗೆ ಆಸ್ಪತ್ರೆಗಳನ್ನೆ ನಿರ್ಮಿಸಿದ್ದಾರೆ. ಅಂತಾದ್ದರಲ್ಲಿ ಏರ್‌ಪೋರ್ಟ್ ಹತ್ತಿರ ಇರುವ ಆಸ್ಪತ್ರೆ ಹಾಗೂ ಹೊಟೇಲ್‌ಗಳಲ್ಲಿ ಉಳಿದುಕೊಳ್ಳುವಂತೆ ಮಾಡಿ ಅವರಿಗೆ ವ್ಯವಸ್ಥೆ ಕಲ್ಪಿಸಬೇಕು ಎಂದು ಸಲಹೆ ನೀಡಿದರು.
ಮಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸರಿಯಾಗಿ ತಪಾಸಣೆ ಮಾಡುತ್ತಿಲ್ಲ. ಮಂಗಳೂರಿನಲ್ಲಿರುವ ಖಾಸಗಿ ಆಸ್ಪತ್ರೆಗಳು ಸರಿಯಾಗಿ ಸ್ಪಂದಿಸುತ್ತಿಲ್ಲ. ಆರೋಗ್ಯ ಸಚಿವರು ಕೂಡಲೆ ಕ್ರಮ ಕೈಗೊಳ್ಳಬೇಕು. ಬೆಂಗಳೂರು ವಿಮಾನ ನಿಲ್ದಾಣದಲ್ಲೂ ಕೂಡ ಸರಿಯಾಗಿ ತಪಾಸಣೆ ಮಾಡುತ್ತಿಲ್ಲ. ಹೊರ ದೇಶದಿಂದ ಬರುವವರನ್ನು ಬಾಯಿಮಾತಲ್ಲಿ ಕೇಳಿ ಕಳಿಸಲಾಗುತ್ತಿದೆ. ಈ ರೀತಿಯಾದರೆ ಹೇಗೆ ಈ ರೋಗ ತಡೆಗಟ್ಟಲು ಸಾಧ್ಯ. ಅಲ್ಲದೆ, ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ಸ್ವಲ್ಪ ದಿನದ ಮಟ್ಟಿಗೆ ಬಾಗಿಲು ಹಾಕಿ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಸದನದ ಗಮನಕ್ಕೆ ತಂದರು.







