'ಗೋಮೂತ್ರದಿಂದ ಕ್ಯಾನ್ಸರ್ ಗುಣ' ಆದ ಕಥೆ ಹೇಳಿದ ಆಸ್ಕರ್ ಫೆರ್ನಾಂಡಿಸ್

ಹೊಸದಿಲ್ಲಿ : ಹಿರಿಯ ಕಾಂಗ್ರೆಸ್ ನಾಯಕ ಆಸ್ಕರ್ ಫೆರ್ನಾಂಡಿಸ್ ಅವರು ಗೋಮೂತ್ರದಿಂದ ಕ್ಯಾನ್ಸರ್ ಗುಣವಾದ ಕುರಿತು ರಾಜ್ಯಸಭೆಯಲ್ಲಿ ಬುಧವಾರ ಮಾತನಾಡಿ ಸ್ವಪಕ್ಷೀಯರಿಗೆ ಅಚ್ಚರಿ ಮೂಡಿಸಿದ್ದಾರೆ. ಒಮ್ಮೆ ಮೀರತ್ ಸಮೀಪದ ಆಶ್ರಮಕ್ಕೆ ಹೋಗಿದ್ದ ವೇಳೆ 'ಗೋಮೂತ್ರ' ಸೇವಿಸಿ ತನ್ನ ಕ್ಯಾನ್ಸರ್ ಕಾಯಿಲೆ ಗುಣವಾಯಿತೆಂದು ಹೇಳಿಕೊಂಡ ವ್ಯಕ್ತಿಯನ್ನು ಭೇಟಿಯಾಗಿದ್ದಾಗಿ ಅವರು ಹೇಳಿದರು.
ಹೋಮಿಯೋಪತಿ ಹಾಗೂ ಭಾರತೀಯ ಔಷಧಿ ಪದ್ಧತಿಗಳ ರಾಷ್ಟ್ರೀಯ ಆಯೋಗ ರಚನೆ ಕುರಿತಂತೆ ಎರಡು ಮಸೂದೆಗಳ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಆಸ್ಕರ್ ''ನಾನು ಗೋಮೂತ್ರದ ಕುರಿತು ಮಾತನಾಡಿದಾಗ ನನ್ನ ಗೆಳೆಯ ಜೈರಾಂ ರಮೇಶ್ ನನ್ನ ಕಾಲೆಳೆಯುತ್ತಾರೆ'' ಎಂದರು.
ಭಾರತೀಯ ಔಷಧಿ ಪದ್ಧತಿಗಳನ್ನೂ ಹೊಗಳಿದ ಅವರು ತಮಗೆ ಮೊಣಕಾಲುಗಳಲ್ಲಿ ತೀವ್ರ ನೋವು ಕಾಡಿದಾಗ ವೈದ್ಯರು ಶಸ್ತ್ರಕ್ರಿಯೆ ಸಲಹೆ ನೀಡಿದ್ದರು, ಆದರೆ ತಾವು `ವಜ್ರಾಸನ' ಅಭ್ಯಸಿಸಿದ್ದನ್ನು ನೆನಪಿಸಿದ್ದಾರೆ. ''ನಾನು ವಜ್ರಾಸನ, ಯೋಗಾಭ್ಯಾಸ ಮಾಡಲು ಆರಂಭಿಸಿದೆ, ಇಂದು ನಾನು ಯಾವುದೇ ಸಮಸ್ಯೆಯಿಲ್ಲದೆ ಕುಸ್ತಿ ಮಾಡಬಲ್ಲೆ'' ಎಂದರು.
''ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಮೊಣಕಾಲಿನ ಶಸ್ತ್ರಕ್ರಿಯೆಗೊಳಗಾದಂತಹ ಸಂದರ್ಭದಲ್ಲಿ ನನಗೆ ವಜ್ರಾಸನದ ಬಗ್ಗೆ ತಿಳಿದ್ದದರೆ ನಾನು ಅವರಿಗೆ ಕೂಡ ವಜ್ರಾಸನ ಮಾಡಲು ಹೇಳುತ್ತಿದ್ದೆ, ಇದು ಅವರ ಸಮಸ್ಯೆಯನ್ನು ಪರಿಹರಿಸುತ್ತಿತ್ತು,'' ಎಂದರು.
ಅಮೆರಿಕದಲ್ಲಿ ಯುವಕರಂತೆಯೇ ನಡೆದಾಡುವ 104 ವರ್ಷದ ವ್ಯಕ್ತಿಯನ್ನು ತಾವು ಭೇಟಿಯಾಗಿದ್ದಾಗಿಯೂ ಹೇಳಿಕೊಂಡ ಆಸ್ಕರ್ ''ಯೋಗ ನಮ್ಮ ಆಸ್ತಿ, ನಾವು ಯೊಗ ಅಭ್ಯಸಿಸಿದರೆ ಆರೋಗ್ಯ ಕ್ಷೇತ್ರದ ನಮ್ಮ ಬಜೆಟಿನ ವೆಚ್ಚಗಳನ್ನು ಅರ್ಧದಷ್ಟು ಕಡಿಮೆಗೊಳಿಸಬಹುದು. ವೈದ್ಯರ ಬಳಿಗೆ ಹೋಗುವುದಕ್ಕಿಂತಲೂ ಮೊದಲು ನಮ್ಮ ಭಾರತೀಯ ಔಷಧಿ ಪದ್ಧತಿ ಸಾಕಷ್ಟು ಪರಿಹಾರವೊದಗಿಸುತ್ತದೆ,'' ಎಂದು ಆಸ್ಕರ್ ಹೇಳಿಕೊಂಡರು.
ಸರಕಾರ ಮಂಡಿಸಿದ ಮಸೂದೆಯನ್ನು ಆಸ್ಕರ್ ಬೆಂಬಲಿಸಿದರಾದರೂ ಅದರಲ್ಲಿ ಯೋಗ ಹಾಗೂ ಪ್ರಕೃತಿ ಚಿಕಿತ್ಸೆಯನ್ನು ಕೈಬಿಟ್ಟಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.







