ಸಂವಿಧಾನದ ಪೀಠಿಕೆಯಿಂದ `ಸಮಾಜವಾದಿ' ಪದ ತೆಗೆದುಹಾಕಲು ಬಿಜೆಪಿ ರಾಜ್ಯಸಭಾ ಸದಸ್ಯನಿಂದ ನಿಲುವಳಿ ಮಂಡನೆ

ಹೊಸದಿಲ್ಲಿ: ಸಂವಿಧಾನದ ಪೀಠಿಕೆಯಿಂದ `ಸಮಾಜವಾದಿ' (ಸೋಶಿಯಲಿಸ್ಟ್) ಪದವನ್ನು ತೆಗೆದುಹಾಕಬೇಕೆಂಬ ಕುರಿತು ಬಿಜೆಪಿಯ ರಾಜ್ಯಸಭಾ ಸದಸ್ಯ ರಾಕೇಶ್ ಸಿನ್ಹಾ ಶುಕ್ರವಾರ ನಿಲುವಳಿ ಮಂಡಿಸಲು ಸಜ್ಜಾಗಿದ್ದಾರೆ. ಸದ್ಯದ ಸನ್ನಿವೇಶದಲ್ಲಿ ಈ ಪದ `ಅನವಶ್ಯಕ' ಎಂದು ಅವರು ವಾದಿಸಿದ್ದಾರೆ.
ಶುಕ್ರವಾರ ಸದಸ್ಯರ ಖಾಸಗಿ ಮಸೂದೆ ಮಂಡನೆಗೆ ಅವಕಾಶವಿರುವ ಸಮಯದಲ್ಲಿ ಅವರು ಈ ಮಸೂದೆ ಮಂಡಿಸಲಿದ್ದು ಈ ಕುರಿತಾದ ನೋಟಿಸ್ ಅನ್ನು ಬುಧವಾರ ಸ್ವೀಕರಿಸಲಾಗಿದೆ.
ದೇಶದ ಸಂವಿಧಾನದ ಪೀಠಿಕೆಯಲ್ಲಿ `ಸೋಶಿಯಲಿಸ್ಟ್' ಹಾಗೂ `ಸೆಕ್ಯಲರ್' ಪದಗಳನ್ನು ತುರ್ತುಪರಿಸ್ಥಿತಿ ಸಂದರ್ಭ 42ನೇ ತಿದ್ದುಪಡಿ ವೇಳೆ ಸೇರಿಸಲಾಗಿತ್ತು. ಈ ಪದವನ್ನು ಪೀಠಿಕೆಯಲ್ಲಿ ಸೇರಿಸುವ ಮುನ್ನ ಸಂಸತ್ತಿನಲ್ಲಿ ಯಾವುದೇ ಚರ್ಚೆ ನಡೆದಿಲ್ಲ ಹಾಗೂ ತುರ್ತುಪರಿಸ್ಥಿತಿಯಲ್ಲಿ ಜನರ ಮೂಲಭೂತ ಹಕ್ಕುಗಳನ್ನು ಹತ್ತಿಕ್ಕಲ್ಪಟ್ಟ ಸಮಯದಲ್ಲಿ ತಿದ್ದುಪಡಿ ತಂದಿದ್ದರಿಂದ ಆ ಪದವನ್ನು ತೆಗೆದುಹಾಕಬೇಕೆಂಬುದು ಸಿನ್ಹಾ ಅವರ ವಾದವಾಗಿದೆ. ಈಗಿನ ನರೇಂದ್ರ ಮೋದಿ ಸರಕಾರ ತನ್ನ ವಿವಿಧ ಯೋಜನೆಗಳ ಮೂಲಕ `ವೆಲ್ಫೇರ್ ಪೊಲಿಟಿಕ್ಸ್'ಗೆ ಆದ್ಯತೆ ನೀಡಿದೆ. ಹೀಗಿರುವಾಗ ಅಂತಹ ಸಾಂಪ್ರದಾಯಿಕತೆಯ ಪದ ಈಗ ಅಗತ್ಯವಿಲ್ಲ ಎಂದು ಸಿನ್ಹಾ ಹೇಳಿಕೊಂಡಿದ್ದಾರೆ.
ಸಂವಿಧಾನದ ಮೂಲ ಪೀಠಿಕೆಯನ್ನೇ ಉಳಿಸಬೇಕು ಎಂಬ ಆಗ್ರಹ ಹಲವರಿಂದ ಈಗಾಗಲೇ ಕೇಳಿ ಬಂದಿದೆ.
2015ರ ಗಣತಂತ್ರ ದಿನಾಚರಣೆ ಸಂದರ್ಭ ಸರಕಾರ ಬಿಡುಗಡೆಗೊಳಿಸಿದ್ದ ಜಾಹೀರಾತುಗಳಲ್ಲಿ ಸಂವಿಧಾನದ ಪೀಠಿಕೆಯಲ್ಲಿನ `ಸೆಕ್ಯುಲರ್' ಹಾಗೂ `ಸೋಶಿಯಲಿಸ್ಟ್' ಪದಗಳು ನಾಪತ್ತೆಯಾಗಿದ್ದು ಭಾರೀ ವಿವಾದಕ್ಕೀಡಾಗಿತ್ತು.





