ಸಂವಿಧಾನವನ್ನು ಕಳೆದುಕೊಂಡರೆ ಅಂತರ್‌ಯುದ್ಧ ಶುರುವಾಗಲಿದೆ, ದೇಶ ಛಿದ್ರವಾಗಲಿದೆ: ಎಸ್.ಆರ್.ಪಾಟೀಲ್

ಬೆಂಗಳೂರು, ಮಾ.19: ದೇಶದಲ್ಲಿ ಕೋಮುವಾದಿ ಶಕ್ತಿಗಳಿಂದ ಮಾನವ ಹಕ್ಕು ಉಲ್ಲಂಘನೆಯಾಗುತ್ತಿದ್ದು, ಇದನ್ನು ನಿಯಂತ್ರಿಸದಿದ್ದರೆ ಅರಾಜಕತೆ ಸೃಷ್ಟಿಯಾಗಲಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಎಚ್ಚರಿಕೆ ನೀಡಿದರು.
ಗುರುವಾರ ವಿಧಾನಪರಿಷತ್‌ನಲ್ಲಿ ಸಂವಿಧಾನ ಕುರಿತ ಚರ್ಚೆಯ ವೇಳೆ ಮಾತನಾಡಿದ ಅವರು, ದೇಶದ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ, ಸಿನಿಮಾ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಕೋಮುವಾದಿಗಳು ಹರಡಿಕೊಂಡಿದ್ದು, ಜನತೆ ಏನು ಊಟ ಮಾಡಬೇಕು, ಯಾವ ಬಟ್ಟೆ ತೊಡಬೇಕು, ಏನು ಮಾತನಾಡಬೇಕೆಂಬುದನ್ನು ನಿಯಂತ್ರಿಸುವ ಹಂತಕ್ಕೆ ಮುಟ್ಟಿದ್ದಾರೆ. ಇದು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿಯಾದದ್ದೆಂದು ಆತಂಕ ವ್ಯಕ್ತಪಡಿಸಿದರು.
ಜನಪ್ರತಿನಿಧಿಗಳು ತಮ್ಮ ವಿರೋಧಿಗಳ ನಾಲಿಗೆ ಕತ್ತರಿಸಿದರೆ, ಕತ್ತು ಕತ್ತರಿಸಿದರೆ ಇಷ್ಟು ಹಣ ಕೊಡುತ್ತೇವೆಂದು ಬಹಿರಂಗವಾಗಿ ಘೋಷಿಸುತ್ತಾರೆ. ಪ್ರಜಾಪ್ರಭುತ್ವ ವ್ಯವಸ್ಥೆ ಇಲ್ಲಿಗೆ ಬಂದು ತಲುಪಿದೆ. ಭಾರತ ಕೇವಲ ಅಭಿವೃದ್ಧಿಯಾದರೆ ಸಲ್ಲದು, ಮಾನವೀಯತೆ ಬೇಕು. ಸಂವಿಧಾನವನ್ನು ನಾವು ರಕ್ಷಿಸಿದರೆ, ಸಂವಿಧಾನ ನಮ್ಮನ್ನು ರಕ್ಷಿಸಲಿದೆ ಎಂದು ಅವರು ಹೇಳಿದರು.
ಭಾರತದ ಸಂವಿಧಾನವು ದೇಶದಲ್ಲಿ ವಿವಿಧ ಧರ್ಮ, ಭಾಷೆ, ನಂಬಿಕೆ, ಆಚಾರ-ವಿಚಾರ, ಆಹಾರ ಪದ್ಧತಿಯ ಜನರನ್ನು ಒಟ್ಟಿಗೆ ಮುನ್ನಡೆಸುತ್ತಿದೆ. ಒಂದು ವೇಳೆ ನಾವು ನಮ್ಮ ಸಂವಿಧಾನವನ್ನು ಕಳೆದುಕೊಂಡರೆ ಅಂತರ್‌ಯುದ್ಧ ಶುರುವಾಗಲಿದೆ, ದೇಶ ಛಿದ್ರವಾಗಲಿದೆ, ಅರಾಜಕತೆ, ಕೋಮುವಾದ ಸಿದ್ಧಾಂತ ಆರಂಭಗೊಳ್ಳಲಿದೆ. ಜನಸಾಮಾನ್ಯರು ಹಕ್ಕು ಕಳೆದುಕೊಂಡು ಬದುಕಬೇಕಾಗುತ್ತದೆ. ಮಹಿಳೆಯರು, ಅಲ್ಪಸಂಖ್ಯಾತರು, ಬಡವರು, ದಲಿತರು ದಬ್ಬಾಳಿಕೆಯಲ್ಲಿ ಬದುಕಬೇಕಾಗಲಿದೆ ಎಂದು ಅವರು ಎಚ್ಚರಿಕೆ ನೀಡಿದರು.
ಸುಪ್ರೀಂ ಕೋರ್ಟ್, ಹೈಕೋರ್ಟ್, ಜಿಲ್ಲಾ ನ್ಯಾಯಾಲಯಗಳಲ್ಲಿ ವಕೀಲರ ಹುದ್ದೆಗಳು ಖಾಲಿ ಇವೆ. ಅದರ ಬಗ್ಗೆ ಗಮನ ಹರಿಸಬೇಕು. ದೆಹಲಿಯಲ್ಲಿ ಗೋಲಿ ಮಾರೋ ಎಂದ ಜನಪ್ರತಿನಿಧಿಯೊಬ್ಬನ ಪ್ರಕರಣ ಏನಾಯ್ತು. ಸ್ವತಂತ್ರ ಭಾರತದ ಇತಿಹಾಸದಲ್ಲಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳು, ದೇಶದಲ್ಲಿ ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಬೇಸರಗೊಂಡು ಸುದ್ದಿಗೋಷ್ಠಿ ಮಾಡಿದ್ದರು. ಇದು ಏನನ್ನು ತೋರಿಸಲಿದೆ ಎಂಬುದನ್ನು ನಾವೆಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕೆಂದು ಅವರು ಹೇಳಿದರು.
ಸುಪ್ರೀಂ ಕೋರ್ಟ್ ನ್ಯಾಯಾಧೀಶರೊಬ್ಬರು ನಿವೃತ್ತಿಗೊಂಡ ಕೆಲವೇ ದಿನಗಳಲ್ಲಿ ರಾಜ್ಯಸಭೆಗೆ ಆಯ್ಕೆಯಾಗಿರುವುದು ಸಾರ್ವಜನಿಕರಲ್ಲಿ ತಪ್ಪಾಭಿಪ್ರಾಯ ಮೂಡುವಂತಾಗಿದೆ. ಇಂತಹದಕ್ಕೆ ಅವಕಾಶ ಮಾಡಿಕೊಡಬಾರದೆಂದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಸದಸ್ಯ ರವಿಕುಮಾರ್, ಓದಿಕೊಂಡವರು, ತಿಳಿದವರು ರಾಜ್ಯಸಭೆಗೆ ಬರುವುದು ತಪ್ಪಾ ಎಂದರು. ಇದಕ್ಕೆ ಬಿಜೆಪಿ ಸದಸ್ಯರೂ ಕೂಡ ದನಿಗೂಡಿಸಿದರು. ಈ ವೇಳೆ ಪ್ರತಿಪಕ್ಷ ಸದಸ್ಯರು ಕೂಡ ಬಿಜೆಪಿ ಸದಸ್ಯರ ವಿರುದ್ಧ ತಿರುಗಿಬಿದ್ದರು. ಹೀಗಾಗಿ ಕೆಲಕಾಲ ಸದನದಲ್ಲಿ ಗದ್ದಲದ ವಾತಾವರಣ ಸೃಷ್ಟಿಯಾಯಿತು.







