ಅಸ್ಸಾಂನ ಸಿಎಎ ವಿರೋಧಿ ಹೋರಾಟಗಾರ, ಗೋರ್ಖಾ ನಾಯಕ ರಾಹುಲ್ ಚೆಟ್ರಿಗೆ ಎನ್‍ಐಎ ಸಮನ್ಸ್

ಗುವಹಾಟಿ: ಅಸ್ಸಾಂನ ದಿಬ್ರೂಘರ್ ವಿವಿಯ ಸ್ನಾತ್ತಕೋತ್ತರ ವಿದ್ಯಾರ್ಥಿಗಳ ಯೂನಿಯನ್ ಪ್ರಧಾನ ಕಾರ್ಯದರ್ಶಿ ಹಾಗೂ ಸಿಎಎ ವಿರೋಧಿ ವಿದ್ಯಾರ್ಥಿ ಹೋರಾಟಗಾರ ರಾಹುಲ್ ಚೆಟ್ರಿ ಅವರ ವಿಚಾರಣೆಗಾಗಿ ರಾಷ್ಟ್ರೀಯ ತನಿಖಾ ಏಜನ್ಸಿ ಅವರಿಗೆ ಸಮನ್ಸ್ ಜಾರಿಗೊಳಿಸಿದೆ.
ಭಾರತೀಯ ಗೋರ್ಖಾ ಯುವ ಪರಿಸಂಘ್ ಇದರ ಅಸ್ಸಾಂ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಚೆಟ್ರಿ ಅವರು ಶುಕ್ರವಾರ ಬೆಳಗ್ಗೆ 11 ಗಂಟೆಗೆ ಎನ್‍ಐಎ ಮುಂದೆ ಹಾಜರಾಗಬೇಕಿದೆ. ಕ್ರಿಮಿನಲ್ ದಂಡ ಸಂಹಿತೆಯ ಸೆಕ್ಷನ್ 160 ಅಡಿಯಲ್ಲಿ ಅವರಿಗೆ ಸಮನ್ಸ್ ಜಾರಿಯಾಗಿದೆ. ಅಸ್ಸಾಂನಲ್ಲಿ ಸಿಎಎ ವಿರೋಧಿ ಯುವ ಹೋರಾಟಗಾರರಲ್ಲಿ ಇವರು ಪ್ರಮುಖರಾಗಿದ್ದಾರೆ.
ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಅವರಿಗೆ ಸಮನ್ಸ್ ಜಾರಿಗೊಳಿಸಲಾಗಿದೆ. ಅಚ್ಚರಿಯೆಂದರೆ ಸಮನ್ಸ್ ನೋಟಿಸ್ ಅನ್ನು ಚೆಟ್ರಿ ಅವರ ಸೋದರನ ಹೆಸರಿನಲ್ಲಿ ನೀಡಲಾಗಿದ್ದು, ರಾಹುಲ್ ಅವರ ಹೆಸರನ್ನು ಅದರಲ್ಲಿ ಕಪ್ಪು ಶಾಯಿಯಲ್ಲಿ ಬರೆಯಲಾಗಿದೆ. ``ನನ್ನ ಸೋದರನಿಗೂ ಸಿಎಎ ವಿರೋಧಿ ಹೋರಾಟಕ್ಕೂ ಸಂಬಂಧವಿಲ್ಲ. ಆತ ಸಾಮಾಜಿಕ ಜಾಲತಾಣಗಳಲ್ಲಿಯೂ ತನ್ನ ಅಭಿಪ್ರಾಯ ವ್ಯಕ್ತಪಡಿಸಿಲ್ಲ, ಇದರ ಹಿಂದೆ ಸಂಚು ಇದೆ'' ಎಂದು ರಾಹುಲ್ ಆರೋಪಿಸಿದ್ದಾರೆ.
ತಾವು ಕೇವಲ ಶಾಂತಿಯುತ ಪ್ರತಿಭಟನೆಗಳಲ್ಲಿ ಮಾತ್ರ ಭಾಗವಹಿಸಿದ್ದಾಗಿಯೂ ರಾಹುಲ್ ಹೇಳಿಕೊಂಡಿದ್ದಾರೆ.







