ಕೊರೋನಾ ವೈರಸ್: ಸೋಂಕಿತರ ಸಂಖ್ಯೆ 168ಕ್ಕೆ ಏರಿಕೆ; ಮೃತರ ಸಂಖ್ಯೆ 4ಕ್ಕೇರಿಕೆ

ಹೊಸದಿಲ್ಲಿ, ಮಾ.19: ಗುರುವಾರ ಕೊರೋನಾ ವೈರಸ್ ಸೋಂಕಿನ 18 ಹೊಸ ಪ್ರಕರಣ ದೃಢಪಟ್ಟಿದ್ದು, ಇದರೊಂದಿಗೆ ದೇಶದಲ್ಲಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ 168ಕ್ಕೇರಿದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ. ಈ ಮಧ್ಯೆ ಪಂಜಾಬ್‌ನಲ್ಲಿ ಮೃತಪಟ್ಟ 72 ವರ್ಷದ ವ್ಯಕ್ತಿಯಲ್ಲೂ ಕೊರೋನಾ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ದೇಶದಲ್ಲಿ ಕೊರೋನಾ ವೈರಸ್‌ಗೆ ಬಲಿಯಾದವರ ಸಂಖ್ಯೆ 4ಕ್ಕೇರಿದೆ.
ಕೊರೋನಾ ಪೀಡಿತರಲ್ಲಿ 25 ವಿದೇಶೀಯರು(ಇಟಲಿಯ 17, ಫಿಲಿಪ್ಪೀನ್ಸ್ 3, ಬ್ರಿಟನ್‌ನ ಇಬ್ಬರು, ಕೆನಡಾ, ಇಂಡೋನೇಶಿಯಾ ಮತ್ತು ಸಿಂಗಾಪುರದ ತಲಾ ಒಬ್ಬರು) ಸೇರಿದ್ದಾರೆ . ಚಂಡೀಗಢದಲ್ಲಿ 23 ವರ್ಷದ ಮಹಿಳೆಗೆ ಕೊರೊನ ವೈರಸ್ ಸೋಂಕು ತಗುಲಿರುವುದು ಬುಧವಾರ ದೃಢಪಟ್ಟಿದ್ದು ಈಕೆ ರವಿವಾರ ಇಂಗ್ಲೆಂಡಿನಿಂದ ಬಂದಿದ್ದರು. ಛತ್ತೀಸ್‌ಗಢ ರಾಜ್ಯದಲ್ಲೂ ಪ್ರಪ್ರಥಮ ಕೊರೊನ ವೈರಸ್ ಸೋಂಕು ಪ್ರಕರಣ ಬುಧವಾರ ದೃಢಪಟ್ಟಿದೆ.
ಲಂಡನ್‌ನಿಂದ ಬಂದಿದ್ದ 24 ವರ್ಷದ ಮಹಿಳೆಯನ್ನು ರಾಯ್‌ಪುರದ ಎಐಐಎಂಎಸ್‌ಗೆ ದಾಖಲಿಸಿ ಪ್ರತ್ಯೇಕ ವಾರ್ಡ್‌ನಲ್ಲಿರಿಸಲಾಗಿತ್ತು. ಮುಂಬೈಯಲ್ಲಿ ಮತ್ತೆ ಎರಡು ಸೋಂಕು ಪ್ರಕರಣ ದೃಢಪಟ್ಟಿದ್ದು ಇದರೊಂದಿಗೆ ಮಹಾರಾಷ್ಟ್ರದಲ್ಲಿ ಸೋಂಕು ಪೀಡಿತರ ಸಂಖ್ಯೆ 47ಕ್ಕೇರಿದೆ. ಕರ್ನಾಟಕದ ಕೊಡಗಿನಲ್ಲಿ ಒಂದು ಪ್ರಕರಣ ದೃಢಪಡುವುದರೊಂದಿಗೆ ಸೋಂಕು ಪೀಡಿತರ ಸಂಖ್ಯೆ 15ಕ್ಕೇರಿದೆ. ದಿಲ್ಲಿಯಲ್ಲಿ 12, ಉತ್ತರಪ್ರದೇಶದಲ್ಲಿ 17, ಕೇರಳದಲ್ಲಿ 27, ತೆಲಂಗಾಣದಲ್ಲಿ 6, ರಾಜಸ್ತಾನದಲ್ಲಿ 4, ಹರ್ಯಾನದಲ್ಲಿ 17, ಲಡಾಖ್‌ನಲ್ಲಿ 8, ಜಮ್ಮು ಮತ್ತು ಕಾಶ್ಮೀರದಲ್ಲಿ 4, ಆಂಧ್ರಪ್ರದೇಶ, ಒಡಿಶಾ, ಉತ್ತರಾಖಂಡ, ಪಶ್ಚಿಮ ಬಂಗಾಳ, ಪಾಂಡಿಚೇರಿ, ಚಂಡೀಗಢ ಮತ್ತು ಪಂಜಾಬ್‌ಗಳಲ್ಲಿ ತಲಾ ಒಂದು ಪ್ರಕರಣ ದೃಢಪಟ್ಟಿದೆ.
ಈ ಮಧ್ಯೆ, ಚೆನ್ನೈಯ ಗಣಿತ ವಿಜ್ಞಾನಗಳ ಸಂಸ್ಥೆಯ ವಿಜ್ಞಾನಿಗಳು ನಡೆಸಿದ ಅಧ್ಯಯನ ದ ಪ್ರಕಾರ, ಭಾರತದಲ್ಲಿ ಕೊರೊನ ವೈರಸ್ ಸೋಂಕಿತ ವ್ಯಕ್ತಿ ಸರಾಸರಿ 1.7 ವ್ಯಕ್ತಿಗೆ ಮಾತ್ರ ಈ ಸೋಂಕನ್ನು ಹರಡುತ್ತಿರುವುದರಿಂದ ಕೊರೊನ ವೈರಸ್ ಸೋಂಕಿತರ ಸಂಖ್ಯೆ ನಿಧಾನಗತಿಯಲ್ಲಿ ಹೆಚ್ಚುತ್ತಿದೆ. ಇದೇ ಪ್ರಮಾಣ ಮುಂದುವರಿದರೆ ಮುಂದಿನ 5 ದಿನಗಳಲ್ಲಿ ಸೋಂಕಿತರ ಸಂಖ್ಯೆ ಸುಮಾರು 200ಕ್ಕೆ ತಲುಪಬಹುದು ಎಂದು ವರದಿ ತಿಳಿಸಿದೆ. ಕೊರೊನ ವೈರಸ್ ವಿರುದ್ಧ ಭಾರತ ಸಮಗ್ರ ಮತ್ತು ದೃಢ ಪ್ರತಿಬಂಧಕ ಕ್ರಮಗಳನ್ನು ಕೈಗೊಂಡಿದೆ ಎಂದು ಭಾರತದಲ್ಲಿ ವಿಶ್ವಸಂಸ್ಥೆಯ ಪ್ರತಿನಿಧಿ ಡಾ ಹೆಂಕ್ ಬೆಕೆಡಮ್ ಶ್ಲಾಘಿಸಿದ್ದಾರೆ. ಭಾರತದಲ್ಲಿ ಫೆಬ್ರವರಿ ಮಧ್ಯಭಾಗದ ಬಳಿಕ ತೀವ್ರವಾದ ಉಸಿರಾಟ ತೊಂದರೆಯ ಸಮಸ್ಯೆ ಎದುರಿಸುತ್ತಿರುವವರನ್ನೂ ತಪಾಸಣೆಗೆ ಒಳಪಡಿಸಲಾಗಿದೆ ಎಂದವರು ಹೇಳಿದ್ದಾರೆ.
ಪಂಜಾಬ್: 72 ವರ್ಷದ ವ್ಯಕ್ತಿ ಸಾವು
ಪಂಜಾಬ್‌ನ ಬಾಂಗ ಸಮುದಾಯ ಆರೋಗ್ಯ ಕೇಂದ್ರದಲ್ಲಿ ತೀವ್ರ ಎದೆನೋವಿನ ಸಮಸ್ಯೆಯಿಂದ ಬುಧವಾರ ಚಿಕಿತ್ಸೆಗೆ ದಾಖಲಾಗಿದ್ದ 72 ವರ್ಷದ ವ್ಯಕ್ತಿಯೊಬ್ಬರು ಕುಸಿದು ಬಿದ್ದು ಮೃತಪಟ್ಟಿದ್ದು ಇವರು ಕೊರೊನ ಸೋಂಕಿತರಾಗಿದ್ದರು ಎಂದು ಆಸ್ಪತ್ರೆಯ ಅಧಿಕಾರಿಗಳು ಹೇಳಿದ್ದಾರೆ. ನವಾನ್‌ಶಹರ್ ನಿವಾಸಿಯಾಗಿದ್ದ ಇವರು ಜರ್ಮನಿಗೆ ತೆರಳಿದ್ದು 15 ದಿನದ ಹಿಂದೆ ಇಟಲಿ ಮಾರ್ಗವಾಗಿ ಪಂಜಾಬ್‌ಗೆ ಆಗಮಿಸಿದ್ದರು. ಇವರ ಸಾವಿಗೆ ನಿಖರ ಕಾರಣ ಪತ್ತೆಹಚ್ಚಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.







