ಕೊರೋನವೈರಸ್ ಭೀತಿ: ಮನೆಗಳಿಂದಲೇ ಕೆಲಸ ಮಾಡುವಂತೆ ನೌಕರರಿಗೆ ಕೇಂದ್ರದ ಸೂಚನೆ
ಮೂರು ಪ್ಯತ್ಯೇಕ ಪಾಳಿಗಳಲ್ಲಿ ಕಚೇರಿ ಸಮಯ

ಹೊಸದಿಲ್ಲಿ,ಮಾ.19: ದೇಶದಲ್ಲಿ ಕೊರೋನವೈರಸ್ ಸೋಂಕು ಹರಡುವುದನ್ನು ತಡೆಯಲು ಮುನ್ನೆಚ್ಚರಿಕೆ ಕ್ರಮಗಳ ಅಂಗವಾಗಿ ಕೇಂದ್ರ ಸರಕಾರವು ಪರ್ಯಾಯ ವಾರಗಳಲ್ಲಿ ಮನೆಗಳಿಂದಲೇ ಕೆಲಸ ನಿರ್ವಹಿಸುವಂತೆ ತನ್ನ ಉದ್ಯೋಗಿಗಳಿಗೆ ಆದೇಶಿಸಿದ್ದು, ಇದು ಎ.4ರವರೆಗೆ ಜಾರಿಯಲ್ಲಿರುತ್ತದೆ. ಶೇ.50ರಷ್ಟು ಗ್ರೂಪ್ ಬಿ ಮತ್ತು ಸಿ ಉದ್ಯೋಗಿಗಳು ಕಚೇರಿಗೆ ಹಾಜರಾದರೆ ಉಳಿದವರು ತಮ್ಮ ಮನೆಗಳಿಂದಲೇ ಕೆಲಸವನ್ನು ನಿರ್ವಹಿಸಲಿದ್ದಾರೆ.
ಸರಕಾರವು ಗುರುವಾರ ಹೊರಡಿಸಿರುವ ಅಧಿಸೂಚನೆಯಂತೆ ಕಚೇರಿಗೆ ಹಾಜರಾಗುವ ನೌಕರರ ಕೆಲಸದ ಅವಧಿಯನ್ನು ಬೆಳಿಗ್ಗೆ 9ರಿಂದ ಸಂಜೆ 5:30,ಬೆಳಿಗ್ಗೆ 9:30ರಿಂದ ಸಂಜೆ 6 ಮತ್ತು ಬೆಳಿಗ್ಗೆ 10ರಿಂದ ಸಂಜೆ 6:30ರವರೆಗೆ,ಹೀಗೆ ಮೂರು ಪಾಳಿಗಳಲ್ಲಿ ವಿಭಜಿಸಲಾಗಿದೆ.
ಗ್ರೂಪ್ ಬಿ ಮತ್ತು ಸಿ ಸಿಬ್ಬಂದಿಗಳಿಗಾಗಿ ಕರ್ತವ್ಯಕ್ಕಾಗಿ ವಾರದ ರೋಸ್ಟರ್ ಸಿದ್ಧಪಡಿಸುವಂತೆ ಮತ್ತು ಪರ್ಯಾಯ ವಾರಗಳಲ್ಲಿ ಕಚೇರಿಗೆ ಹಾಜರಾಗುವಂತೆ ತಿಳಿಸುವಂತೆ ಎಲ್ಲ ಇಲಾಖಾ ಮುಖ್ಯಸ್ಥರಿಗೆ ನಿರ್ದೇಶ ನೀಡಲಾಗಿದೆ. ಮೊದಲ ವಾರದ ರೋಸ್ಟರ್ ಸಿದ್ಧಗೊಳಿಸುವಾಗ ಕಚೇರಿಗಳಿಗೆ ಸಮೀಪ ವಾಸವಾಗಿರುವವರು ಅಥವಾ ಕಚೇರಿಗೆ ಪ್ರಯಾಣಿಸಲು ಸ್ವಂತ ವಾಹನ ಬಳಸುವವರನ್ನು ಆದ್ಯತೆಯಲ್ಲಿ ಪರಿಗಣಿಸುವಂತೆಯೂ ಇಲಾಖಾ ಮುಖ್ಯಸ್ಥರಿಗೆ ಸೂಚಿಸಲಾಗಿದೆ.
ಮನೆಗಳಿಂದ ಕಾರ್ಯ ನಿರ್ವಹಿಸುವ ಅಧಿಕಾರಿಗಳು ಸದಾ ಕಾಲ ದೂರವಾಣಿ ಮತ್ತು ಇತರ ವಿದ್ಯುನ್ಮಾನ ಸಂಪರ್ಕ ವಿಧಾನಗಳ ಮೂಲಕ ಲಭ್ಯರಿರಬೇಕು ಮತ್ತು ತುರ್ತು ಸಂದರ್ಭದಲ್ಲಿ ಕಚೇರಿಗೆ ಹಾಜರಾಗಲು ಸಿದ್ಧರಿರಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಈ ಆದೇಶವು ಅಗತ್ಯ/ತುರ್ತು ಸೇವೆಗಳಲ್ಲಿ ತೊಡಗಿಕೊಂಡಿರುವ ಕಚೇರಿಗಳು ಮತ್ತು ಸಿಬ್ಬಂದಿಗಳಿಗೆ ಹಾಗೂ ಕೊರೋನವೈರಸ್ ಪಿಡುಗಿನ ವಿರುದ್ಧದ ಹೋರಾಟದಲ್ಲಿ ನೇರವಾಗಿ ತೊಡಗಿರುವವರಿಗೆ ಅನ್ವಯವಾಗುವುದಿಲ್ಲ.
ಸಾರ್ವಜನಿಕರು ಕಚೇರಿಗಳಿಗಳಿಗೆ ಭೇಟಿ ನೀಡುವುದನ್ನು ನಿರುತ್ತೇಜಿಸುವಂತೆ,ಸೂಕ್ತ ಸ್ಥಳಗಳಲ್ಲಿ ಥರ್ಮಲ್ ಸ್ಕ್ರೀನರ್‌ಗಳನ್ನು ಅಳವಡಿಸುವಂತೆ ಮತ್ತು ಹ್ಯಾಂಡ್ ಸ್ಯಾನಿಟೈಸರ್‌ಗಳನ್ನು ಇರಿಸುವಂತೆಯೂ ಎಲ್ಲ ಇಲಾಖೆಗಳಿಗೆ ಸೂಚಿಸಲಾಗಿದೆ.
ಫ್ಲೂದಂತಹ ಲಕ್ಷಣಗಳನ್ನು ಹೊಂದಿರುವವರಿಗೆ ಸೂಕ್ತ ಚಿಕಿತ್ಸೆ ಪಡೆಯುವಂತೆ/ಪ್ರತ್ಯೇಕ ನಿಗಾದಲ್ಲಿರುವಂತೆ ಸೂಚಿಸಬಹುದು ಎಂದು ಅಧಿಸೂಚನೆಯಲ್ಲಿ ತಿಳಿಸಿರುವ ಸಿಬ್ಬಂದಿ ಸಚಿವಾಲಯವು, ಸರಕಾರಿ ಕಟ್ಟಡಗಳಲ್ಲಿರುವ ಎಲ್ಲ ಜಿಮ್‌ಗಳು ಮತ್ತು ಬಾಲವಾಡಿಗಳನ್ನು ಮುಚ್ಚುವಂತೆ ಆದೇಶಿಸಿದೆ.
ಹೆಚ್ಚು ಅಪಾಯದ ಗುಂಪಿನಲ್ಲಿರುವ ಉದ್ಯೋಗಿಗಳು ಅಂದರೆ ವಯಸ್ಸಾದವರು,ಕಾಯಿಲೆಗಳನ್ನು ಹೊಂದಿರುವವರು ಮತ್ತು ಗರ್ಭಿಣಿಯರು ಹೆಚ್ಚುವರಿ ಎಚ್ಚರಿಕೆಯನ್ನು ವಹಿಸುವಂತೆ ಸೂಚಿಸಲಾಗಿದೆ.







