ಕಾಸರಗೋಡಿನಲ್ಲಿ ಮತ್ತೊಂದು ಪ್ರಕರಣ: ದುಬೈಯಿಂದ ಆಗಮಿಸಿದ ಯುವಕನಲ್ಲಿ ಕೊರೋನ ಸೋಂಕು ಪತ್ತೆ

ಕಾಸರಗೋಡು, ಮಾ.19: ಜಿಲ್ಲೆಯಲ್ಲಿ ಮತ್ತೊಂದು ಕೊರೋನ ವೈರಸ್ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಇದುವರೆಗೆ ದೃಢಪಟ್ಟ ಪ್ರಕರಣಗಳ ಸಂಖ್ಯೆ ಮೂರಕ್ಕೇರಿದೆ.
ದುಬೈಯಿಂದ ಕೆಲ ದಿನಗಳ ಹಿಂದೆಯಷ್ಟೇ ಆಗಮಿಸಿದ್ದ ಯುವಕನೋರ್ವ ಕೊರೋನ ವೈರಸ್ ಸೋಂಕಿಗೆ ಒಳಗಾಗಿರುವುದು ವೈದ್ಯಕೀಯ ತಪಾಸಣಾ ವರದಿಯಿಂದ ಖಚಿತಗೊಂಡಿದೆ. ದುಬೈಯಿಂದ ಆಗಮಿಸಿದ್ದ ಈ ವ್ಯಕ್ತಿಯನ್ನು ತೀವ್ರ ನಿಗಾದಲ್ಲಿರಿಸಲಾಗಿತ್ತು. ಗುರುವಾರ ಸಂಜೆ ವೈದ್ಯಕೀಯ ಪರೀಕ್ಷಾ ವರದಿ ಲಭಿಸಿದಾಗ ಸೋಂಕಿಗೊಳಗಾಗಿರುವುದು ದೃಢಪಟ್ಟಿದೆ.
ಈ ಹಿಂದೆ ಚೀನಾದಿಂದ ಬಂದಿದ್ದ ವಿದ್ಯಾರ್ಥಿ ಹಾಗೂ ಬಳಿಕ ದುಬೈಯಿಂದ ಆಗಮಿಸಿದ್ದ ವ್ಯಕ್ತಿಯಲ್ಲಿ ಸೋಂಕು ಪತ್ತೆಯಾಗಿತ್ತು. ಇದೀಗ ಮೂರನೇ ಪ್ರಕರಣ ಪತ್ತೆಯಾಗಿರುವುದು ಜನತೆಯಲ್ಲಿ ಆತಂಕಕ್ಕೆ ಕಾರಣವಾಗಿದೆ. ಜಿಲ್ಲೆಯಲ್ಲಿ ಒಟ್ಟು 546 ಮಂದಿ ನಿಗಾದಲ್ಲಿದ್ದು, ಈ ಪೈಕಿ 9 ಮಂದಿಯನ್ನು ಐಸೋಲೇಶನ್ ವಾರ್ಡ್‌ಗೆ ದಾಖಲಿಸಲಾಗಿದೆ. ಹೊಸದಾಗಿ 21 ಮಂದಿಯ ರಕ್ತದ ಸ್ಯಾಂಪಲ್‌ನ್ನು ತಪಾಸಣೆಗೆ ಕಳುಹಿಸಲಾಗಿದೆ. ಇದುವರೆಗೆ 170 ಮಂದಿಯ ರಕ್ತದ ಮಾದರಿಯನ್ನು ತಪಾಸಣೆಗೆ ಕಳುಹಿಸಿದ್ದು, ಈ ಪೈಕಿ ಮೂವರಲ್ಲಿ ಸೋಂಕು ಪತ್ತೆಯಾಗಿದೆ . ಇನ್ನು ಹಲವು ಮಂದಿಯ ಪರೀಕ್ಷಾ ವರದಿ ಬರಲು ಬಾಕಿಯಿವೆ ಎಂದು ಆರೋಗ್ಯ ಇಲಾಖೆಯ ಪ್ರಕಟನೆ ತಿಳಿಸಿದೆ.







