ಕೊರೋನ ವೈರಸ್ ಭೀತಿ: ಉಡುಪಿ ಧರ್ಮಪ್ರಾಂತ್ಯಕ್ಕೆ ಧರ್ಮಾಧ್ಯಕ್ಷರ ಸೂಚನೆ

ಉಡುಪಿ, ಮಾ.19: ಕೊರೋನ ವೈರಸ್ ದಾಳಿಗೆ ಇಡೀ ವಿಶ್ವವೇ ತಲ್ಲಣ ಗೊಂಡಿದ್ದು, ಈ ಮಾರಣಾಂತಿಕ ವೈರಸ್‌ಗೆ ಬಲಿಯಾಗದಂತೆ ಹಾಗೂ ಪರೋಕ್ಷವಾಗಿ ಈ ವೈರಸ್ ಸೋಂಕನ್ನು ಇತರರಿಗೆ ಹರಡದಂತೆ ಜಾಗರೂಕತೆ ವಹಿಸಬೇಕು. ಇದಕ್ಕಾಗಿ ಉಡುಪಿಯ ಧರ್ಮಾಧ್ಯಕ್ಷರಾಗಿರುವ ಅ.ವಂ. ಜೆರಾಲ್ಡ್ ಐಸಾಕ್ ಲೋಬೊ ಅವರು ಉಡುಪಿ ಧರ್ಮಪ್ರಾಂತದ ಜನತೆಗೆ ಉಡುಪಿ ಜಿಲ್ಲಾಧಿಕಾರಿ ಈ ಸಂಬಂಧ ನೀಡಿರುವ ಆದೇಶದನ್ವಯ ಕೆಲವು ಮಾರ್ದರ್ಶಿ ಸೂತ್ರಗಳನ್ನು ನೀಡಿದ್ದಾರೆ.
ಈಗಿನ ವಿಷಮ ಪರಿಸ್ಥಿತಿಯಲ್ಲಿ, ಮನುಜಕುಲದ ಪ್ರತಿಯೊಬ್ಬರನ್ನು ಅಪಾಯ ದಿಂದ ರಕ್ಷಿಸಲು ಸರ್ವಶಕ್ತ ಭಗವಂತನನ್ನು ಪ್ರಾರ್ಥಿಸೋಣ. ಆರೋಗ್ಯ ಮತ್ತು ಸುರಕ್ಷತೆಯನ್ನು ಕಾಪಾಡುವ ನಿಟ್ಟಿನಲ್ಲಿ, ಚರ್ಚ್‌ಗಳಲ್ಲಿ ಜನರು ಗುಂಪಾಗಿ ಸೇರುವುದನ್ನು ನಿಷೇಧಿಸಲಾಗಿದೆ. ಚರ್ಚ್‌ನಲ್ಲಿ ನೆರವೇರುವ ಎಲ್ಲಾ ಬಲಿಪೂಜೆಗಳನ್ನು (ದಿನಂಪ್ರತಿ ಹಾಗೂ ಭಾನುವಾರ) ರದ್ಧುಪಡಿಸಲಾಗಿದೆ.
ಚರ್ಚ್‌ನಲ್ಲಿ ಆಯೋಜಿಸುವ ಪ್ರಾರ್ಥನಾ ಕೂಟಗಳು, ಕಾರ್ಯಾಗಾರಗಳು, ಶಿಲುಬೆಯ ಹಾದಿ, ಮೆರವಣಿಗೆಗಳು, ಬೇಸಿಗೆ ಶಿಬಿರಗಳು, ಇನ್ನಿತರ ಸಾಮೂಹಿಕ ಧಾರ್ಮಿಕ ಆಚರಣೆಗಳನ್ನು ರದ್ದುಪಡಿಸಲಾಗಿದೆ. ಕುಟುಂಬದಲ್ಲಿ ಸಾವು ಸಂಭವಿಸಿದಾಗ, ಅಂತಿಮ ಕ್ರಿಯೆಯ ಪ್ರಕ್ರಿಯೆಯನ್ನು, ಕುಟುಂಬ ಸದಸ್ಯರ ಸಮ್ಮುಖದಲ್ಲಿ ಸರಳವಾಗಿ ನಡೆಸಬೇಕು.
ನೆಗಡಿ, ಕೆಮ್ಮು, ಜ್ವರ, ಇನ್ನಿತರ ರೋಗದ ಲಕ್ಷಣಗಳು ಕಂಡುಬಂದಲ್ಲಿ, ಅಂಥವರು ಚರ್ಚ್‌ಗೆ ಅಥವಾ ಇನ್ನಿತರ ಸ್ಥಳಗಳಿಗೆ ಹೋಗದೆ ತಮ್ಮ ಮನೆಯ ಸುರಕ್ಷತೆಯಲ್ಲಿ ಉಳಿಯಬೇಕು. ಆರೋಗ್ಯ ಮತ್ತು ಸುರಕ್ಷತೆಯ ನಿಟ್ಟಿನಲ್ಲಿ, ಚರ್ಚ್ ಹಾಲ್‌ಗಳು ಹಾಗೂ ಸಭಾಗೃಹಗಳನ್ನು ಯಾವುದೇ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳಿಗೆ ನೀಡಬಾರದು.
ವೈರಸ್ ಸೋಂಕಿನ ಈ ವಿಷಮ ಪರಿಸ್ಥಿತಿಯಲ್ಲಿ ಜನರು ತಮ್ಮ ಕುಟುಂಬ ಗಳಲ್ಲಿ ಜೊತೆಗೂಡಿ ಪ್ರಾರ್ಥನೆ, ಜಪಸರ, ಶಿಲುಬೆಯ ಹಾದಿ, ಇನ್ನಿತರ ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಹೆಚ್ಚು ಮಗ್ನರಾಗಬೇಕು. ಚರ್ಚ್‌ನಲ್ಲಿ ಸಾಮೂಹಿಕ ಧಾರ್ಮಿಕ ಚಟುವಟಿಕೆಗಳಿಗೆ ನಿಷೇಧವಿದ್ದರೂ, ಚರ್ಚ್‌ಗಳು ಹಾಗೂ ಪ್ರಾರ್ಥನಾ ಮಂದಿರಗಳು ಜನರ ವೈಯಕ್ತಿಕ ಪ್ರಾರ್ಥನೆ ಹಾಗೂ ಖಾಸಗಿ ಧ್ಯಾನಕ್ಕಾಗಿ ತೆರೆದಿರುತ್ತವೆ.
ಸಾರ್ವಜನಿಕರು ವೈಯಕ್ತಿಕವಾಗಿ ಹಾಗೂ ಸಾಮುದಾಯಿಕವಾಗಿ ನಿರ್ಮಲತೆಗೆ ಹೆಚ್ಚು ಮಹತ್ವವನ್ನು ನೀಡಿ, ಸರ್ಕಾರ ಹಾಗೂ ಸ್ಥಳೀಯ ಆಡಳಿತವು ನೀಡಿದ ಎಲ್ಲ ಆದೇಶಗಳನ್ನು ಚಾಚೂ ತಪ್ಪದೆ ಪಾಲಿಸಬೇಕು. ಈ ಮೇಲಿನ ಕ್ರಮಗಳು ಮಾ.31ರವರೆಗೆ ಚಾಲ್ತಿಯಲ್ಲಿರುತ್ತವೆ ಎಂದು ಉಡುಪಿ ಬಿಷಪ್‌ರು ಹೇಳಿಕೆಯಲ್ಲಿ ತಿಳಿಸಿದ್ದಾರೆ.







