ಮಲ್ಪೆ ಬಂದರೊಳಗೆ 14 ವರ್ಷದೊಳಗಿನ ಮಕ್ಕಳಿಗೆ ಪ್ರವೇಶವಿಲ್ಲ: ಸದಾಶಿವ ಪ್ರಭು

ಉಡುಪಿ, ಮಾ.19: ಮಲ್ಪೆ ಬಂದರು ಪ್ರದೇಶದಲ್ಲಿ ಅಪ್ರಾಪ್ತ ವಯಸ್ಸಿನ ಮಕ್ಕಳು ಮೀನು ಮಾರಾಟದಲ್ಲಿ ತೊಡಗಿರುವ ದೂರುಗಳು ಬಂದಿದ್ದು, ಈ ಹಿನ್ನೆಲೆಯಲ್ಲಿ ಮಲ್ಪೆ ಬಂದರಿನೊಳಗೆ 14 ವರ್ಷ ಕೆಳಗಿನ ಮಕ್ಕಳಿಗೆ ಯಾವುದೇ ಕಾರಣಕ್ಕೂ ಪ್ರವೇಶ ನೀಡಲಾಗುವುದಿಲ್ಲ ಎಂದು ಅಪರ ಜಿ್ಲಾಧಿಕಾರಿ ಸದಾಶಿವ ಪ್ರಭು ತಿಳಿಸಿದ್ದಾರೆ.
ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಮಕ್ಕಳ ರಕ್ಷಣಾ ಘಟಕದ ಸಮಿತಿ ಸಭೆಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.
ಮಲ್ಪೆ ವ್ಯಾಪ್ತಿಯ ಹನುಮಂತನಗರ, ನಿಟ್ಟೂರು ಮತ್ತು ಕೊಳ ಮುಂತಾದ ಕಡೆಗಳ ಅಪ್ರಾಪ್ತ ವಯಸ್ಸಿನ ಮಕ್ಕಳು ಬೆಳಗ್ಗಿನ ಜಾವ ಮೀನುಗಾರಿಕಾ ಬೋಟುಗಳಲ್ಲಿ ತೆರಳುತ್ತಿರುವ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಮಲ್ಪೆ ಬಂದರಿಗೆ ಪ್ರವೇಶಿಸುವ ನಾಲ್ಕೂ ಗೇಟುಗಳಲ್ಲಿ ಮೀನುಗಾರಿಕಾ ಇಲಾಖೆ, ಮಲ್ಪೆ ಪೋಲೀಸ್, ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ತೀವ್ರ ನಿಗಾ ಇಟ್ಟು, ಬಂದರಿನೊಳಗೆ ಪ್ರವೇಶಿಸುವ ಪ್ರತಿಯೊಂದು ವಾಹನಗಳನ್ನೂ ತಪಾಸಣೆಗೊಳಪಡಿಸಿ ಮಕ್ಕಳು ಇಲ್ಲವೆನ್ನುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದವರು ಸೂಚನೆ ನೀಡಿದರು.
ಬಂದರು ಪ್ರವೇಶಿಸುವ ಎಲ್ಲಾ ಗೇಟುಗಳಲ್ಲಿಯೂ ಸೆಕ್ಯೂರಿಟಿ ಗಾರ್ಡಗಳನ್ನು ನಿಯೋಜಿಸಬೇಕು ಹಾಗೂ ಹೆತ್ತವರು ತಮ್ಮ ಮಕ್ಕಳನ್ನು ಯಾವುದೇ ಕಾರಣಕ್ಕೂ ಮೀನುಗಾರಿಕಾ ಬೋಟುಗಳಲ್ಲಿ ಕಳುಹಿಸಬಾರದು ಎಂದು ಆದೇಶಿಸಿದ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರು, ಜಿಲ್ಲಾಡಳಿತದ ಆದೇಶವನ್ನು ಧಿಕ್ಕರಿಸಿ ಮಕ್ಕಳನ್ನು ಬೋಟುಗಳಲ್ಲಿ ಕಳುಹಿಸಿದಲ್ಲಿ ಆ ಮಕ್ಕಳ ಹೆತ್ತವರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಮೀನುಗಾರಿಕೆಯಲ್ಲಿ ತೊಡಗಿರುವ ಮಕ್ಕಳಲ್ಲಿ ಹೊರ ಜಿಲ್ಲೆಯ ವಲಸೆ ಕಾರ್ಮಿಕರ ಮಕ್ಕಳೇ ಹೆಚ್ಚಿದ್ದು, ಈಗಾಗಲೇ ಒಂದು ಸುತ್ತಿನ ಕಾರ್ಯಾಚರಣೆ ನಡೆಸಿ 19 ಮಕ್ಕಳನ್ನು ಮಕ್ಕಳ ರಕ್ಷಣಾ ಘಟಕದ ಸುಪರ್ದಿಗೆ ಒಪ್ಪಿಸಲಾಗಿದ್ದರೂ ಆ ಮಕ್ಕಳು ಮತ್ತೆ ಮೀನು ಮಾರಾಟದಲ್ಲಿ ತೊಡಗಿರುವ ಮಾಹಿತಿಗಳು ಇರುವುದರಿಂದ ರಕ್ಷಿಸಲ್ಪಟ್ಟ ಮಕ್ಕಳು ಮತ್ತೆ ಮೀನು ಮಾರಾಟದಲ್ಲಿ ತೊಡಗದಂತೆ ಅವರ ಮೇಲೆ ನಿಗಾ ಇಡಬೇಕು ಹಾಗೂ ಅವರ ಹೆತ್ತವರಿಂದ ಮುಚ್ಚಳಿಕೆಯನ್ನು ಬರೆಸಿಕೊಳ್ಳಬೇಕು ಎಂದು ಪ್ರಭು ಸೂಚಿಸಿದರು.
ದೇಶದೆಲ್ಲೆಡೆ ಕೊರೋನ ಸೋಂಕಿನ ಭೀತಿ ಹಬ್ಬುತ್ತಿರುವುದರಿಂದ ಮೀನುಗಾರರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಬೇಕು. ಬಂದರು ಪ್ರವೇಶಿಸುವ ಕಡೆಗಳಲ್ಲಿ ಥರ್ಮಲ್ ಸ್ಕ್ಯಾನರ್ ಅಳವಡಿಸಿ, ಬಂದರು ಪ್ರವೇಶಿಸುವವರೆಲ್ಲರ ತಪಾಸಣೆ ನಡೆಸಿ, ಆರೋಗ್ಯ ಸಮಸ್ಯೆಗಳಿದ್ದಲ್ಲಿ ಅವರನ್ನು ಸಮುದಾಯ ಕೇಂದ್ರಗಳಿಗೆ ಕಳುಹಿಸಬೇಕು. ಕೇರಳದಿಂದ ಮಲ್ಪೆಬಂದರಿಗೆ ಬರುವಂತಹ ಮೀನುಗಾರಿಕಾ ವಾಹನಗಳನ್ನು ಸಂಪೂರ್ಣವಾಗಿ ನಿರ್ಂಧಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ವಾಸುದೇವ ಉಪಾಧ್ಯಾಯ, ಮೀನುಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ದಿನೇಶ್ ಕುಮಾರ್, ಮೀನುಗಾರಿಕಾ ಇಲಾಖೆಯ ಉಪ ನಿರ್ದೇಶಕ ಗಣೇಶ್ ಕೆ., ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಶಿವಕುಮಾರ್, ಮಲ್ಪೆ ಸಿಎಸ್‌ಪಿ ರಾಘವೇಂದ್ರ, ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಮತ್ತು ಮಲ್ಪೆ ವ್ಯಾಪ್ತಿ ಎಲ್ಲಾ ಸರಕಾರಿ ಶಾಲೆಗಳ ಮುಖ್ಯೋಪಾಧ್ಯಾಯರು ಉಪಸ್ಥಿತರಿದ್ದರು.








