ಕೊರೋನ ಸೋಂಕು ಪೀಡಿತ ಇಬ್ಬರು ಗುಣಮುಖ, ನಾಳೆ ಮನೆಗೆ: ಸಚಿವ ಡಾ.ಕೆ.ಸುಧಾಕರ್

ಬೆಂಗಳೂರು, ಮಾ.19: ರಾಜ್ಯಾದ್ಯಂತ ಕೊರೋನ ತೀವ್ರಗತಿಯಲ್ಲಿ ಹರಡುತ್ತಿದ್ದು, ಗುರುವಾರ ಒಬ್ಬರಲ್ಲಿ ಕೊರೋನ ದೃಢಪಟ್ಟಿದ್ದು, ಇದೀಗ ಕೊರೋನ ದೃಢಪಟ್ಟವರ ಸಂಖ್ಯೆ 15ಕ್ಕೆ ಏರಿಕೆಯಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ಗುರುವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲಬುರಗಿಯಲ್ಲಿ ಮೃತಪಟ್ಟ ವ್ಯಕ್ತಿಯೂ ಸೇರಿ 15 ಜನರಲ್ಲಿ ಕೊರೋನ ದೃಢಪಟ್ಟಿದ್ದು, ಮೃತ ವ್ಯಕ್ತಿ ಬಿಟ್ಟು, ಉಳಿದ ಎಲ್ಲರಿಗೂ ಚಿಕಿತ್ಸೆ ಮುಂದುವರಿಸಲಾಗಿದೆ. ಇಂದು ಹೊಸದಾಗಿ, 114 ಜನರನ್ನು ಅವಲೋಕನೆಗಾಗಿ ಪಟ್ಟಿ ಮಾಡಲಾಗಿದೆ. ಇದುವರೆಗೂ 3049 ಜನರನ್ನು ಅವಲೋಕನೆಗೆ ಒಳಪಡಿಸಿದ್ದು, 74 ಜನರನ್ನು ಮನೆಯಲ್ಲಿ ಪ್ರತ್ಯೇಕವಾಗಿರಿಸಲಾಗಿದೆ ಎಂದರು.
ಇಲ್ಲಿಯವರೆಗೆ ಮನೆಯಲ್ಲಿ ಪ್ರತ್ಯೇಕವಾಗಿ ಇರಿಸಿದವರ ಸಂಖ್ಯೆ 2280 ತಲುಪಿದೆ. ಆಸ್ಪತ್ರೆಗಳಲ್ಲಿ ಐಸೋಲೇಷನ್‌ನಲ್ಲಿ 26 ಜನರನ್ನು ಇರಿಸಲಾಗಿದೆ. ಇಲ್ಲಿಯವರೆಗೆ 97 ಜನರನ್ನು ಐಸೋಲೇಷನ್‌ನಲ್ಲಿಡಲಾಗಿದೆ. ಗುರುವಾರ 75 ಜನರ ಮಾದರಿ ಸಂಗ್ರಹ ಮಾಡಿದ್ದು, 98 ಜನರು 28 ದಿನಗಳ ಅವಲೋಕನವನ್ನು ಪೂರ್ತಿ ಮಾಡಿದ್ದಾರೆ ಎಂದು ಅವರು ಹೇಳಿದರು.
ಸೋಂಕು ಪೀಡಿತ ಇಬ್ಬರು ಗುಣಮುಖ: ಗುರುವಾರ 46 ವರದಿಗಳು ಸೇರಿ 915 ಕೊರೋನ ವರದಿ ನೆಗಟಿವ್ ಬಂದಿದ್ದು, ಒಂದು ವರದಿ ಕೊರೋನ ಪಾಸಿಟಿವ್ ಬಂದಿದೆ. ಸೋಂಕು ಪೀಡಿತ ಇಬ್ಬರು ಸಂಪೂರ್ಣ ಗುಣಮುಖರಾಗಿದ್ದಾರೆ. ನಾಳೆ(ಶುಕ್ರವಾರ) ಇಬ್ಬರನ್ನು ಮನೆಗೆ ಕಳಿಸಿಕೊಡುತ್ತಿದ್ದೇವೆ. ಅಲ್ಲದೆ ಎರಡು ಬಾರಿ ಅವರನ್ನು ಮತ್ತೆ ಪರೀಕ್ಷೆ ಮಾಡಲಾಗುತ್ತೆ. ಆಗ ನೆಗೆಟಿವ್ ಬಂದರಷ್ಟೇ ಮನೆಗೆ ಕಳಿಸುತ್ತೇವೆ ಎಂದು ಅವರು ತಿಳಿಸಿದರು.
ಬೇಕಾಬಿಟ್ಟಿ ಓಡಾಡಬೇಡಿ: ಮನೆಯಲ್ಲಿಯೇ ಇರಬೇಕಾದವರು ಬೇಕಾಬಿಟ್ಟಿ ಓಡಾಡುವುದನ್ನು ನಿಲ್ಲಿಸಬೇಕು. ಅವರ ಮೇಲೆ ತೀವ್ರ ನಿಗಾ ವಹಿಸಲಾಗಿದೆ. ಅವರ ಮನೆಗಳ ಬಳಿ ಒಬ್ಬ ಕಾನ್ಸ್‌ಟೇಬಲ್ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗುತ್ತದೆ ಎಂದು ಸುಧಾಕರ್ ವಿವರಿಸಿದರು.
ಧಾರ್ಮಿಕ ಕಾರ್ಯಕ್ರಮಗಳ ನಿಷೇಧ: ಕೇಂದ್ರದ ದಿಟ್ಟ ಕ್ರಮಗಳನ್ನು ನಾವು ಗಂಭೀರವಾಗಿ ತೆಗೆದುಕೊಳ್ಳುತ್ತೇವೆ. ಧಾರ್ಮಿಕ ಸ್ಥಳಗಳು, ಸಂತೆಗಳಲ್ಲಿ ಹೆಚ್ಚು ಜನ ಸೇರುವುದನ್ನ ನಿಷೇಧ ಮಾಡಲು ನಿರ್ಧರಿಸಿದ್ದೇವೆ. ಧಾರ್ಮಿಕ ಸ್ಥಳಗಳಲ್ಲಿ ನಿರ್ಬಂಧ ಹೇರುವ ವಿಚಾರವಾಗಿ ಎಲ್ಲ ಧರ್ಮ ಗುರುಗಳು ಸಹಕಾರ ನೀಡಬೇಕು. ಈ ಬಗ್ಗೆ ಎಲ್ಲರೊಂದಿಗೆ ಮಾತನಾಡುತ್ತೇವೆ ಎಂದರು.
ಟಾಸ್ಕ್‌ಫೋರ್ಸ್ ರಚನೆ: ಎಲ್ಲ ಅಂತರ್‌ರಾಷ್ಟ್ರೀಯ ಪ್ರಯಾಣಿಕರನ್ನು ಬೆಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪರೀಕ್ಷೆ ಮಾಡಲಾಗುತ್ತಿದೆ. ಇದುವರೆಗೂ, 1,22,500 ಜನ ಹೊರದೇಶಗಳಿಂದ ಬೆಂಗಳೂರು ಹಾಗೂ ಮಂಗಳೂರಿಗೆ ಬಂದಿದ್ದಾರೆ. ಕೊರೋನ ನಿಯಂತ್ರಣ ವಿಚಾರದಲ್ಲಿ ಸಂಪುಟ ಉಪ ಸಮಿತಿ(ಟಾಸ್ಕ್‌ಫೋರ್ಸ್) ರಚನೆ ಮಾಡಲಾಗಿದೆ ಎಂದರು.
ಪಬ್ ಮುಚ್ಚಿ ಎಂದು ಈಗಾಗಲೇ ಹೇಳಿದ್ದೇವೆ. ಆದರೆ ಪಬ್ ಗಳು ಸರಿಯಾಗಿ ಆದೇಶ ಪಾಲಿಸುತ್ತಿಲ್ಲ. ಒಂದು ವೇಳೆ ಪಬ್ ನವರು ಆದೇಶ ಪಾಲಿಸದಿದ್ದರೆ ಪಬ್ಗಳ ಲೈಸನ್ಸ್ ರದ್ದು ಮಾಡುತ್ತೇವೆ. 10 ವರ್ಷದ ಕೆಳಗಿರುವ ಮಕ್ಕಳು, 60 ವರ್ಷ ಮೇಲ್ಪಟ್ಟವರು ಮನೆಯಿಂದ ಹೊರಗೆ ಬಾರದಂತೆ ಕ್ರಮ ವಹಿಸಿ ಎಂದು ಸುಧಾಕರ್ ಮನವಿ ಮಾಡಿದರು.
ಕೊರೋನ ಸೋಂಕು ಹರಡುವುದನ್ನು ತಡೆಯಲು ಮುಂಜಾಗ್ರತಾ ಕ್ರಮವಾಗಿ ವಿದೇಶದಿಂದ ಬೆಂಗಳೂರಿಗೆ ಬರುತ್ತಿರುವ ಪ್ರಯಾಣಿಕರಿಗೆ 14 ದಿನಗಳ ಪ್ರತ್ಯೇಕಿಕರಣದ ಗುರುತಾಗಿ, ಬೆಂಗಳೂರಿನ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಕೈಗಳ ಮೇಲೆ ಸ್ಟಾಂಪಿಂಗ್ ಮಾಡಲಾಗುತ್ತಿದೆ. ಮೂರು ವಿಭಾಗದಲ್ಲಿ ಕೊರೋನ ಸೋಂಕಿತರನ್ನು ಗುರುತಿಸಿದ್ದು, ಎ ವಿಭಾಗದಲ್ಲಿ ಸೋಂಕು ದೃಢಪಟ್ಟರೆ ತಕ್ಷಣ ಆಸ್ಪತ್ರೆಗೆ, ಬಿ ನಲ್ಲಿ ಸೋಂಕು ಕಂಡುಬಂದರೆ ತೀವ್ರ ನಿಗಾ ಘಟಕಕ್ಕೆ ವರ್ಗ ಹಾಗೂ ಸಿ ನಲ್ಲಿ ಮನೆಯಲ್ಲಿಯೇ ನಿಗಾ ವಹಿಸಲು ಕ್ರಮ ಕೈಗೊಳ್ಳಲಾಗಿದೆ.
-ಬಿ.ಶ್ರೀರಾಮುಲು, ಆರೋಗ್ಯ ಸಚಿವ







