ಕಸ ವಿಲೇವಾರಿ: ಶಾಸಕರಿಬ್ಬರು ಚರ್ಚಿಸಿ ಸಮಸ್ಯೆ ಬಗೆಹರಿಸಿಕೊಳ್ಳಲಿ- ಗೃಹ ಸಚಿವ ಬೊಮ್ಮಾಯಿ

ಬೆಂಗಳೂರು, ಮಾ. 19: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಸಮೀಪದ ಗ್ರಾಮದಲ್ಲಿ ಕಸ ವಿಲೇವಾರಿ ಸಮಸ್ಯೆ ನಿವಾರಣೆ ಸಂಬಂಧ ಶಾಸಕರಾದ ರಾಜೇಶ್ ನಾಯ್ಕ್ ಮತ್ತು ಯು.ಟಿ.ಖಾದರ್ ಕೂತು ಮಾತನಾಡಿ ಬಗೆಹರಿಸಿಕೊಳ್ಳಲಿ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಸಲಹೆ ನೀಡಿದ್ದಾರೆ.
ಗುರುವಾರ ವಿಧಾನಸಭೆ ಶೂನ್ಯವೇಳೆಯಲ್ಲಿ ಕಾಂಗ್ರೆಸ್ ಸದಸ್ಯ ಯು.ಟಿ.ಖಾದರ್ ಪ್ರಸ್ತಾಪಿಸಿದ ವಿಷಯಕ್ಕೆ ಸರಕಾರದ ಪರವಾಗಿ ಉತ್ತರ ನೀಡಿದ ಅವರು, ಕಸ ವಿಲೇವಾರಿಗೂ ಗೃಹ ಇಲಾಖೆಗೂ ಸಂಬಂಧವಿಲ್ಲ. ಆದರೆ, ಈ ವಿಚಾರ ಸಂಬಂಧ ಸಂಘರ್ಷವಾಗಿದ್ದರಿಂದ ಪೊಲೀಸರು ಮಧ್ಯಪ್ರವೇಶ ಮಾಡಬೇಕಾಗಿದೆ ಎಂದರು.
ಆರಂಭಕ್ಕೆ ಮಾತನಾಡಿದ ಸದಸ್ಯ ಯು.ಟಿ.ಖಾದರ್, ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಕಸ ವಿಲೇವಾರಿ ಮಾಡುತ್ತಿರುವುದರಿಂದ ಸಮಸ್ಯೆ ಉದ್ಭವಿಸಿದೆ. ಹೀಗಾಗಿ ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವವರೆಗೂ ಕಸ ವಿಲೇ ತಾತ್ಕಾಲಿಕವಾಗಿ ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿದರು.
ಇದಕ್ಕೆ ಆಕ್ಷೇಪಿಸಿದ ಬಿಜೆಪಿ ಶಾಸಕ ರಾಜೇಶ್ ನಾಯ್ಕ್, ಬಹಳ ಹಿಂದಿನಿಂದ ಅದೇ ಜಾಗದಲ್ಲಿ ಕಸ ವಿಲೇವಾರಿ ಮಾಡಲಾಗುತ್ತಿದೆ. ಇದೀಗ ಆಕ್ಷೇಪ ಸರಿಯಲ್ಲ. ಆ ಪ್ರದೇಶದಲ್ಲಿ ಕಸ ವಿಲೇಗೆ ಬೇರೆ ಸ್ಥಳಾವಕಾಶವಿಲ್ಲ ಎಂದು ಗಮನ ಸೆಳೆದರು.







