ಪ್ರಯಾಣ ನಿರ್ಬಂಧ ಪ್ರಶ್ನಿಸಿ ಕುನಾಲ್ ಕಾಮ್ರಾ ಸಲ್ಲಿಸಿದ್ದ ಅಪೀಲು ತಿರಸ್ಕರಿಸಿದ ದಿಲ್ಲಿ ಹೈಕೋರ್ಟ್

ಹೊಸದಿಲ್ಲಿ: ಪತ್ರಕರ್ತ ಅರ್ನಬ್ ಗೋಸ್ವಾಮಿ ಅವರಿಗೆ ವಿಮಾನ ಪ್ರಯಾಣದ ವೇಳೆ ಪ್ರಶ್ನೆಗಳನ್ನು ಕೇಳಿದ ಪ್ರಕರಣದಲ್ಲಿ ವಿಮಾನಯಾನ ಸಂಸ್ಥೆಗಳು ತನ್ನ ಮೇಲೆ ಹೇರಿರುವ ಪ್ರಯಾಣ ನಿರ್ಬಂಧವನ್ನು ಪ್ರಶ್ನಿಸಿ ಕಾಮಿಡಿಯನ್ ಕುನಾಲ್ ಕಾಮ್ರಾ ಅವರು ಸಲ್ಲಿಸಿದ್ದ ಅಪೀಲನ್ನು ದಿಲ್ಲಿ ಹೈಕೋರ್ಟ್ ಇಂದು ತಿರಸ್ಕರಿಸಿದೆ.
"ಈ ರೀತಿಯ ವರ್ತನೆಯನ್ನು ಅನುಮತಿಸುವ ಪ್ರಶ್ನೆಯೇ ಇಲ್ಲ'' ಎಂದು ನ್ಯಾಯಾಲಯ ಹೇಳಿದೆ.
ಜನವರಿಯಲ್ಲಿ ಇಂಡಿಗೋ ವಿಮಾನದಲ್ಲಿ ನಡೆದ ಘಟನೆಯ ನಂತರ ಇಂಡಿಗೋ ಕಾಮ್ರಾ ಮೇಲೆ ನಿಷೇಧ ಹೇರಿದ್ದರೆ ನಂತರ ಏರ್ ಇಂಡಿಯಾ, ಸ್ಪೈಸ್ ಜೆಟ್ ಹಾಗೂ ಗೋ ಏರ್ ಕೂಡ ಅಂತಹದೇ ಕ್ರಮ ಕೈಗೊಂಡಿತ್ತು.
"ವಿಮಾನದೊಳಗೆ ಆತಂಕ ಸೃಷ್ಟಿಸಬಹುದಾದ ಇಂತಹ ವರ್ತನೆ ಅಸ್ವೀಕಾರ್ಹ ಹಾಗೂ ಇತರ ಪ್ರಯಾಣಿಕರ ಸುರಕ್ಷತೆಗೆ ಅಪಾಯವೊಡ್ಡುತ್ತದೆ. ಇತರ ವಿಮಾನಯಾನ ಸಂಸ್ಥೆಗಳೂ ಇಂಡಿಗೋ ಕೈಗೊಂಡ ಕ್ರಮವನ್ನೇ ಅನುಸರಿಸಬೇಕು'' ಎಂದು ಘಟನೆಯ ನಂತರ ಕೇಂದ್ರ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಟ್ವೀಟ್ ಮಾಡಿದ್ದರು.
ತನ್ನ ಮೇಲೆ ಪ್ರಯಾಣ ನಿರ್ಬಂಧ ಹೇರಿದ ನಂತರ ಕಾಮ್ರಾ ಅವರು ಇಂಡಿಗೋಗೆ ಕಾನೂನು ನೋಟಿಸ್ ಜಾರಿಗೊಳಿಸಿ ಕ್ಷಮೆಯಾಚಿಸುವಂತೆ ಸೂಚಿಸಿದ್ದಲ್ಲದೆ, 25 ಲಕ್ಷ ರೂ. ಪರಿಹಾರ ನೀಡಬೇಕು ಹಾಗೂ ನಿರ್ಬಂಧ ತೆರವುಗೊಳಿಸಬೇಕೆಂದೂ ಆಗ್ರಹಿಸಿದ್ದರು.







