ಕೊರೋನ ಭೀತಿ: ಕೊಡಗು ಜಿಲ್ಲೆಗೆ ಖಾಸಗಿ, ಪ್ರವಾಸಿ ವಾಹನಗಳ ಸಂಚಾರ ನಿಷೇಧ

ಮಡಿಕೇರಿ, ಮಾ.20: ಕೊಡಗು ಜಿಲ್ಲೆಯಲ್ಲಿ ಗುರುವಾರ ಮೊದಲ ಕೊರೋನ ಪ್ರಕರಣ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಅಂತರಾಜ್ಯ ಗಡಿ ಭಾಗಗಳಲ್ಲಿ ಸಕಾರಣವಿಲ್ಲದೆ ಖಾಸಗಿ ಅಥವಾ ಪ್ರವಾಸಿ ವಾಹನಗಳಲ್ಲಿ ಜಿಲ್ಲೆಗೆ ಭೇಟಿ ನೀಡುವುದು ಮತ್ತು ತಂಗುವುದನ್ನು ನಿಷೇಧಿಸಿ ಜಿಲ್ಲಾ ದಂಡಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಆದೇಶ ಹೊರಡಿಸಿದ್ದಾರೆ.
ಜಿಲ್ಲೆಯಲ್ಲಿ ಮೊದಲ ಕೊರೋನ ಪ್ರಕರಣ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಮತ್ತು ಸಾರ್ವಜನಿಕರ ಹಿತಾಸಕ್ತಿಯಿಂದ ನೆರೆ ರಾಜ್ಯಗಳಿಂದ ಜಿಲ್ಲೆಗೆ ಆಗಮಿಸುವ ಪ್ರವಾಸಿಗರನ್ನು ನಿಯಂತ್ರಿಸುವುದು ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟಿರುವ ಜಿಲ್ಲಾಧಿಕಾರಿ ಈ ಆದೇಶ ಹೊರಡಿಸಿದ್ದಾರೆ.
ಕಾರ್ಮಿಕರನ್ನು ಸಾಗಿಸುವಂತಿಲ್ಲ
ನೆರೆ ರಾಜ್ಯಗಳಿಂದ ಜಿಲ್ಲೆಯ ಮೂಲಕ ದೂರ ಪ್ರಯಾಣ ಮಾಡುವ ವಾಹನಗಳು ಕೊಡಗು ಜಿಲ್ಲೆಯಲ್ಲಿ ನಿಲುಗಡೆಗೊಳಿಸುವುದು ಮತ್ತು ತಂಗುವುದನ್ನೂ ನಿಷೇಧಿಸಲಾಗಿದ್ದು, ನೆರೆ ರಾಜ್ಯಗಳಿಂದ ಜಿಲ್ಲೆಗೆ ಕಾರ್ಮಿಕರನ್ನು ಕರೆತರಲು ಮತ್ತು ಜಿಲ್ಲೆಯಿಂದ ನೆರೆ ರಾಜ್ಯಗಳಿಗೆ ಕಾರ್ಮಿಕರನ್ನು ಕರೆದೊಯ್ಯುವ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
ಜಿಲ್ಲೆಗೆ ಸಜೀವ ಕೋಳಿ, ಕುರಿ, ಆಡು ಮುಂತಾದವುಗಳನ್ನು, ಮಾಂಸಾಹಾರ ಮತ್ತು ಮಾಂಸಾಹಾರ ಉತ್ಪನ್ನಗಳನ್ನು ಸಾಗಿಸುವುದನ್ನು ನಿಷೇಧಿಸಲಾಗಿದ್ದು, ದಿನನಿತ್ಯ ಬಳಕೆಯ ಅವಶ್ಯಕ ಸಾಮಾಗ್ರಿಗಳ ಸಾಗಾಟಕ್ಕೆ ಇದು ಅನ್ವಯಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.







