ಚಿಕ್ಕಮಗಳೂರು: ಮೈನಾ ಹಕ್ಕಿ, ಪಾರಿವಾಳಗಳ ನಿಗೂಢ ಸಾವು; ಹಕ್ಕಿ ಜ್ವರ ಶಂಕೆ

ಚಿಕ್ಕಮಗಳೂರು, ಮಾ.20: ಕೊರೋನ ವೈರಸ್ ಸೋಂಕಿನ ಭೀತಿ ಇಡೀ ದೇಶವನ್ನು ಕಾಡುತ್ತಿರುವ ಮಧ್ಯೆ ಹಕ್ಕಿಜ್ವರದ ಭೀತಿಯೂ ರಾಜ್ಯದಲ್ಲಿ ತಲೆದೋರಿದೆ. ಕೊರೋನ ವೈರಸ್ ಭೀತಿಯಿಂದಾಗಿ ಜಿಲ್ಲಾದ್ಯಂತ ಜನಜೀವನ ಅಸ್ತವ್ಯಸ್ತಗೊಂಡಿರುವಾಗಲೇ ನಗರದಲ್ಲಿ ಮೂರು ಹಕ್ಕಿಗಳು ನಿಗೂಢವಾಗಿ ಸತ್ತಿರುವ ಘಟನೆಗಳು ವರದಿಯಾಗಿದ್ದು, ಹಕ್ಕಿ ಜ್ವರದ ಆತಂಕ ಸಾರ್ವಜನಿಕರನ್ನು ಕಾಡುತ್ತಿದೆ.
ನಗರದ ಜಿಲ್ಲಾಕಾರಿ ಕಚೇರಿ ಆವರಣದಲ್ಲಿ ಶುಕ್ರವಾರ ಎರಡು ಮೈನಾಹಕ್ಕಿಗಳು ಸತ್ತು ಬಿದ್ದಿದ್ದರೆ, ನಗರದ ಕೋಟೆ ಸುಗ್ಗಿಕಲ್ಲು ಬಳಿ ಪಾರಿವಾಳವೊಂದು ನಿಗೂಢವಾಗಿ ಸತ್ತು ಬಿದ್ದಿರುವುದು ಬೆಳಕಿಗೆ ಬಂದಿದ್ದು, ಕೊರೋನ, ಹಕ್ಕಿಜ್ವರದ ಭೀತಿಯಲ್ಲಿರುವ ಜನತೆಗೆ ಮೈನಾ ಹಕ್ಕಿ, ಪಾರಿವಾಳಗಳ ಸಾವಿನಿಂದಾಗಿ ಇದೀಗ ಹಕ್ಕಿಜ್ವರದ ಭೀತಿಯೂ ಕಾಡಲಾರಂಭಿಸಿದೆ.
ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸಾರ್ವಜನಿಕ ವಾಹನಗಳು ಪಾರ್ಕಿಂಗ್ ಮಾಡುವ ಜಾಗದಲ್ಲಿ ಶುಕ್ರವಾರ ಬೆಳಗ್ಗೆ ಎರಡು ಮೈನಾ ಹಕ್ಕಿಗಳ ಕಳೇಬರ ಕಂಡುಬಂದಿದ್ದರೆ, ಸಮೀಪದ ಕೋಟೆ ಬಡಾವಣೆಯ ಸುಗ್ಗಿಕಲ್ಲುಗಳಿರುವ ಸ್ಥಳದಲ್ಲಿ ಒಂದು ಪಾರಿವಾಳ ಸತ್ತುಬಿದ್ದಿರುವುದು ಕಂಡು ಬಂದಿದೆ. ಎರಡು ಮೈನಾ ಹಕ್ಕಿಗಳು 10 ಅಡಿ ಅಂತರದಲ್ಲಿ ಸತ್ತು ಬಿದ್ದಿದ್ದು, ಸಾರ್ವಜನಿಕರು ಜಿಲ್ಲಾ ಸರ್ವೇಕ್ಷಣಾ ಇಲಾಖೆ, ಅರಣ್ಯ ಇಲಾಖೆ ಹಾಗೂ ಪಶುಪಾಲನಾ ಇಲಾಖೆಗೆ ವಿಷಯ ತಿಳಿಸಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಸರ್ವೇಕ್ಷಣಾ ಇಲಾಖೆ ಅಧಿಕಾರಿ ಡಾ.ಮಂಜುನಾಥ್, ಪಶುಪಾಲನಾ ಇಲಾಖೆ ಉಪನಿರ್ದೇಶಕ ಡಾ.ರಮೇಶ್, ಅರಣ್ಯ ಇಲಾಖೆ ಗಾರ್ಡ್ ಒಬ್ಬರು ಸ್ಥಳಕ್ಕಾಗಮಿಸಿದ್ದು, ಮೂವರು ಸೇರಿ ಎರಡೂ ಹಕ್ಕಿಗಳನ್ನು ಸುರಕ್ಷತಾ ಕ್ರಮದಲ್ಲಿ ಚೀಲದಲ್ಲಿ ಹಾಕಿ ಕೊಂಡೊಯ್ದರು. ಪಕ್ಷಿಗಳ ದೈಹಿಕ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿ ಸಾವಿಗೆ ನಿಖರ ಕಾರಣ ಏನು ಎಂಬುದನ್ನು ಖಚಿತಪಡಿಸಿಕೊಳ್ಳಲಾಗುವುದು ಎಂದು ಈ ವೇಳೆ ಅವರು ತಿಳಿಸಿದರು.
ತಿಂಗಳ ಹಿಂದೆ ನಗರದ ಬಸವನಹಳ್ಳಿ ಕೆರೆಗೆ ಹತ್ತಾರು ಸತ್ತ ಪಾರಿವಾಳಗಳನ್ನು ತಂದು ಸುರಿಯಲಾಗಿತ್ತು. ನಗರದ ತಿಲಕ್ ಪಾರ್ಕಿನಲ್ಲಿ ಇತ್ತೀಚೆಗೆ ಎರಡು ಪಾರಿವಾಳಗಳು ಸತ್ತುಬಿದ್ದಿದ್ದವು. ನಗರದ ಅಲ್ಲಲ್ಲಿ ಹಕ್ಕಿಗಳ ಸಾವು ಕಳೆದ ಒಂದು ತಿಂಗಳಿಂದ ನಡೆಯುತ್ತಿದ್ದು, ಅವುಗಳ ಸಾವಿಗೆ ನಿಖರ ಕಾರಣ ಏನೆಂಬುದು ಮಾತ್ರ ಇದುವರೆಗೂ ತಿಳಿದು ಬಂದಿಲ್ಲ.







