ವಿಪಕ್ಷ ಸದಸ್ಯರ ಸಭಾತ್ಯಾಗದ ನಡುವೆಯೂ ವಿಧೇಯಕ ಅಂಗೀಕಾರ

ಬೆಂಗಳೂರು, ಮಾ.20: ವಿರೋಧ ಪಕ್ಷದ ಸದಸ್ಯರ ಸಭಾತ್ಯಾಗದ ನಡುವೆಯೇ ಮೇಲ್ಮನೆಯಲ್ಲಿ ಕರ್ನಾಟಕ ಉನ್ನತ ಶೈಕ್ಷಣಿಕ ಸಂಸ್ಥೆಗಳಲ್ಲಿ ಶಿಕ್ಷಕರ ವೇತನ ಮತ್ತು ನಿವೃತ್ತಿ ವೇತನದ ನಿಯಂತ್ರಣ ವಿಧೇಯಕ-2020 ಅಂಗೀಕಾರಗೊಂಡಿತು.
ಶುಕ್ರವಾರ ವಿಧಾನಪರಿಷತ್‌ನಲ್ಲಿ ಉಪ ಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಅಶ್ವಥ್ ನಾರಾಯಣ ವಿಧೇಯಕವನ್ನು ಮಂಡಿಸಿ, ಅನುಮೋದನೆಗೆ ಅವಕಾಶ ನೀಡುವಂತೆ ಮನವಿ ಮಾಡಿದರು. ಅದಕ್ಕೆ ವಿಪಕ್ಷಗಳ ಸದಸ್ಯರು ವಿರೋಧ ವ್ಯಕ್ತಪಡಿಸಿ, ವಿಧೇಯಕ ವಾಪಸ್ಸು ಪಡೆಯುವಂತೆ ಮನವಿ ಮಾಡಿದರು. ಆಡಳಿತ ಪಕ್ಷವು ಹಿಂಪಡೆಯಲು ಒಪ್ಪದಿದ್ದಕ್ಕೆ, ಎಲ್ಲರೂ ಸಭತ್ಯಾಗ ಮಾಡಿ ಹೊರನಡೆದರು.
ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಮಾತನಾಡಿ, ಶಿಕ್ಷಕರ ನೇಮಕಾತಿ ವೇಳೆಯಲ್ಲಿಯೇ ವೇತನ ಹಾಗೂ ಪಿಂಚಣಿ ಎಲ್ಲವೂ ನಿಗದಿಯಾಗಿರುತ್ತದೆ. ಈ ವಿಧೇಯಕದಲ್ಲಿ ಸಾಮಾಜಿಕ ನ್ಯಾಯವಿಲ್ಲ. ಹೀಗಾಗಿ, ಇದರ ಮರುಪರಿಶೀಲನೆಯಾಗಬೇಕು ಎಂದು ಆಗ್ರಹಿಸಿದರು. ಇದಕ್ಕೆ ಧ್ವನಿಗೂಡಿಸಿದ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ್, ಹೈಕೋರ್ಟ್, ಸುಪ್ರೀಂಕೋರ್ಟ್ ಪಿಂಚಣಿ ವಿಚಾರದಲ್ಲಿ ಆದೇಶ ನೀಡಿದ್ದು, ಅದನ್ನು ಪರಿಗಣಿಸಿಲ್ಲ ಎಂದು ಹೇಳಿದರು.
ವಿಧೇಯಕವನ್ನು ಸಮರ್ಥಿಸಿಕೊಂಡ ಸಚಿವ ಅಶ್ವಥ್ ನಾರಾಯಣ, ಈ ವಿಧೇಯಕದ ಮೂಲಕ ಯಾರಿಗೂ ತಾರತಮ್ಯ ಮಾಡುತ್ತಿಲ್ಲ. ಪ್ರತಿಯೊಂದು ಬಾರಿಯೂ ಪೇ ಸ್ಕೇಲ್ ಹಾಗೂ ಪಿಂಚಣಿ ಸ್ಕೇಲ್ ಬದಲಾಗುತ್ತಲೇ ಇರುತ್ತದೆ. ಹೀಗಾಗಿ, ಈ ವಿಧೇಯಕ ತಂದಿದ್ದು, ಎಲ್ಲರಿಗೂ ಸಮಾನವಾಗಿ ಕಾಣುವ ಉದ್ದೇಶವಾಗಿದೆ ಎಂದು ಹೇಳಿದರು.
ಅದಕ್ಕೆ ವಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಪ್ರತಿಕ್ರಿಯಿಸಿ, ಈ ಸರಕಾರಕ್ಕೆ ಕಾನೂನಿನ ಮೇಲೆ ಗೌರವವಿಲ್ಲ. ಶಿಕ್ಷಕರ ಮೇಲೆ ಕಾಳಜಿಯೂ ಇಲ್ಲದಂತಾಗಿದೆ. ಹೀಗಾಗಿ, ಇದನ್ನು ವಿರೋಧಿಸಿ ನಾವು ಸಭಾತ್ಯಾಗ ಮಾಡುತ್ತೇವೆ ಎಂದು ಘೋಷಿಸಿದರು.







