ಉಡುಪಿ: ಜುಮಾ ನಮಾಝ್‌ನಲ್ಲಿ ಕೊರೋನ ಜಾಗೃತಿ

ಉಡುಪಿ, ಮಾ.20: ಕೊರೋನಾ ಭೀತಿಯ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆ ಯಲ್ಲಿ ವಿಧಿಸಿರುವ ನಿರ್ಬಂಧಕಾಜ್ಞೆಯಂತೆ ಜನರ ಆರೋಗ್ಯದ ದೃಷ್ಠಿಯಿಂದ ಜಿಲ್ಲೆಯ ಮಸೀದಿಗಳಲ್ಲಿ ಇಂದು ನಡೆದ ಶುಕ್ರವಾರದ ಜುಮಾ ನಮಾಝ್‌ನ್ನು 15 ನಿಮಿಷಗಳಿಗೆ ಸೀಮಿತಗೊಳಿಸಿ ಶೀಘ್ರವಾಗಿ ಮುಗಿಸಲಾಯಿತು.
ಉಡುಪಿ, ಕುಂದಾಪುರ, ಗಂಗೊಳ್ಳಿ, ಕಾಪು, ಕಾರ್ಕಳ ಸೇರಿದಂತೆ ಜಿಲ್ಲೆಯ ಬಹುತೇಕ ಮಸೀದಿಗಳಲ್ಲಿ ಮಧ್ಯಾಹ್ನ 12:45ಕ್ಕೆ ಆರಂಭಗೊಂಡ ಜುಮಾ ನಮಾಝ್‌ನ್ನು 15 ನಿಮಿಷಗಳಿಗೆ ಸೀಮಿತಗೊಳಿಸಲಾಯಿತು. ಇದೇ ಸಂದರ್ಭ ದಲ್ಲಿ ಮಸೀದಿಯ ಧರ್ಮಗುರುಗಳು ಕೊರೋನ ವೈರಸ್ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಿದರು. ಅಲ್ಲದೆ ಕೆಲವು ಮಸೀದಿಗಳಲ್ಲಿ ಮಾ.22ರ ಜನತಾ ಕರ್ಫ್ಯೂ ಬಗ್ಗೆಯೂ ಮಾಹಿತಿ ನೀಡಲಾಯಿತು.
ಉಡುಪಿಯ ಜಾಮಿಯಾ ಮಸೀದಿ ಸೇರಿದಂತೆ ಹಲವು ಮಸೀದಿಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಾಗಿತ್ತು. ವುಝೂ ಮಾಡುವ ಸ್ಥಳದಲ್ಲಿ ಸಾಬೂನಿನ ವ್ಯವಸ್ಥೆ ಮತ್ತು ಮಸೀದಿಯೊಳಗೆ ಪ್ರವೇಶಿಸುವವರಿಗೆ ಸ್ಯಾನಿಟೈಝರ್ ಮೂಲಕ ಕೈ ತೊಳೆಯುವಂತೆ ಮಾಡಲಾಯಿತು. ನಮಾಝಿನ ಬಳಿಕ ಮಹಾಮಾರಿ ಕೊರೋನಾ ನಿರ್ಮೂಲನೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.





