ಕೊರೋನ ಭೀತಿ: ಚಾಮರಾಜನಗರದಲ್ಲಿ ನೆರೆ ರಾಜ್ಯಗಳ ವಾಹನ ಸಂಚಾರಕ್ಕೆ ನಿರ್ಬಂಧ

ಚಾಮರಾಜನಗರ, ಮಾ.20: ಕೊರೋನ ವೈರಸ್ ಸೊಂಕು ಜಿಲ್ಲೆಗೆ ವ್ಯಾಪಿಸದಿರಲು ಜಿಲ್ಲೆಗೆ ಹೊಂದಿಕೊಂಡಿರುವ ಅಂತರಾಜ್ಯ ಗಡಿಯಲ್ಲಿ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.
ಚಾಮರಾಜನಗರ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಜಿಲ್ಲೆಯೊಳಗೆ ನೆರೆ ರಾಜ್ಯಗಳಿಂದ ಬಂದು ಹೋಗುವ ಬಸ್, ಲಾರಿ, ಸರಕು ಸಾಗಾಣಿಕೆ ವಾಹನಗಳನ್ನು ಮಾ.29ರವರೆಗೆ ನಿಷೇಧ ಮಾಡಲಾಗಿದೆ ಹಾಗೂ ಸ್ವಂತ ವಾಹನ (ಬಿಳಿ ಬೋರ್ಡ್) ಇರುವರು ಮಾತ್ರ ಸಂಚಾರ ಮಾಡಬಹುದಾಗಿದ್ದು, ಕೊರೋನ ಸೊಂಕಿನ ಪ್ರಮಾಣ ಕಡಿಮೆಯಾಗದಿದ್ದರೆ ಸ್ವಂತ ವಾಹನದ ಸಂಚಾರವೂ ಬಂದ್ ಮಾಡಲಾಗುವುದು ಎಂದು ತಿಳಿಸಿದರು.
ಜಿಲ್ಲೆಯಾದ್ಯಂತ ಇರುವ ಎಲ್ಲಾ ಮುಜರಾಯಿ ಮತ್ತು ಖಾಸಗಿ ದೇವಾಲಯಗಳನ್ನು ಸಹ ಮುನ್ನೆಚ್ಚರಿಕೆ ಕ್ರಮವಾಗಿ ಮಾ.29 ರವರೆಗೆ ಬಂದ್ ಮಾಡಲು ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರು ಆದೇಶ ನೀಡಿದ್ದರಿಂದ ಕ್ರಮ ವಹಿಸಲು ನಿರ್ಧರಿಸಲಾಗಿದೆ ಎಂದರು.
ಜಿಲ್ಲೆಯ ತೆರಕಣಾಂಬಿ ಮತ್ತು ಗುಂಡ್ಲುಪೇಟೆ ಕೃಷಿ ಉತ್ಪನ್ನ ಮಾರುಕಟ್ಟೆಯನ್ನು ಸಹ ಮಾ.29 ತನಕ ವಹಿವಾಟು ಮತ್ತು ಸಂತೆ ನಡೆಯದಂತೆ ಆದೇಶ ನೀಡಲಾಗಿದೆ ಹಾಗೂ ಜಿಲ್ಲೆಯಾದ್ಯಂತ ಸರ್ಕಾರಿ ಸೇವೆ ಸಿಗುವ ಆಧಾರ್ ನೊಂದಣಿ ಮತ್ತು ತಿದ್ದುಪಡಿಗಳಿಗೂ ಕೊರೋನ ಏಪೆಕ್ಟ್ ನಿಂದ ಬಂದ್ ಮಾಡಲಾಗಿದೆ. ಅಟಲ್ ಜಿ ಸೇವಾ ಕೇಂದ್ರದಲ್ಲಿ ಯಾವುದೇ ಸರ್ಕಾರಿ ಸೇವೆಗಳು ಮುಂದಿನ ಆದೇಶದ ತನಕ ಲಭ್ಯವಿರುವುದಿಲ್ಲ ಎಂದು ಹೇಳಿದರು.
ಗ್ರಾಮ ಪಂಚಾಯತ್ ನಲ್ಲಿ ಆಸ್ತಿ ನೊಂದಣಿ ಹಾಗೂ ಇನ್ನಿತರ ನಾಗರೀಕ ಸೇವೆಗಳಿಗೆ ಬ್ರೇಕ್ ಹಾಕಲಾಗಿದೆ. ಉಪ ನೊಂದಣಿ ಕಚೇರಿಯಲ್ಲಿ ಯಾವುದೇ ಆಸ್ತಿ ನೊಂದಣಿ ಕಾರ್ಯ ಮಾಡದಂತೆ ಆದೇಶ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಕುಡಿಯುವ ನೀರು ಸರಭರಾಜು, ಆಹಾರ ನಾಗರೀಕ ಸರಬರಾಜು, ಹಾಲು ವಿತರಣೆಗೆ ಯಾವುದೇ ನಿರ್ಬಂಧ ಇರುವುದಿಲ್ಲ ಎಂದು ಹೇಳಿದರು.







