ಐದು ಟೂರ್ನಮೆಂಟ್ ಗಳನ್ನು ರದ್ದುಗೊಳಿಸಿದ ಬಿಡಬ್ಲ್ಯುಎಫ್
ಹೊಸದಿಲ್ಲಿ, ಮಾ.20: ಕೊರೋನ ವೈರಸ್ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್ (ಬಿಡಬ್ಲುಎಫ್) ಶುಕ್ರವಾರ ಇನ್ನೂ ಐದು ಟೂರ್ನಮೆಂಟ್‌ಗಳನ್ನು ರದ್ದುಪಡಿಸಿದೆ.
ರದ್ದುಗೊಂಡಿರುವ ಟೂರ್ನಮೆಂಟ್‌ಗಳಲ್ಲಿ 3 ಕಾಂಟಿನೆಂಟಲ್ ಚಾಂಪಿಯನ್‌ಶಿಪ್‌ಗಳು ಸೇರಿವೆ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಅರ್ಹತೆ ಪಡೆಯುವ ದೃಷ್ಟಿಯಿಂದ ಆಟಗಾರರಿಗೆ ಈ ಟೂರ್ನಿಗಳು ಹೆಚ್ಚಿನ ಪ್ರಾಮುಖ್ಯತೆ ಪಡೆದಿದ್ದವು. ವಾರದ ಹಿಂದೆ ಟೂರ್ನಮೆಂಟ್‌ಗಳನ್ನು ಎಪ್ರಿಲ್ 12ರ ತನಕ ಮುಂದೂಡಿತ್ತು. ಇದೀಗ ಮುಂದೂಡಲ್ಪಟ್ಟ ಐದು ಟೂರ್ನಮೆಂಟ್‌ಗಳನ್ನು ಬಿಡಬ್ಲುಎಫ್ ರದ್ದುಗೊಳಿಸಿದೆ.
ರದ್ದುಗೊಂಡಿರುವ ಟೂರ್ನಮೆಂಟ್‌ಗಳ ವಿವರ ಇಂತಿವೆ: ಕ್ರೊಯೇಶಿಯನ್ ಇಂಟರ್‌ನ್ಯಾಶನಲ್(ಎ.16-19), ಪೆರು ಇಂಟರ್‌ನ್ಯಾಶನಲ್ 2020(ಎ.16-19), ಯುರೋಪಿಯನ್ ಚಾಂಪಿಯನ್‌ಶಿಪ್(ಎ.21-26), ಬ್ಯಾಡ್ಮಿಂಟನ್ ಏಶ್ಯ ಚಾಂಪಿಯನ್‌ಶಿಪ್(ಎ.21-26) ಮತ್ತು ಪ್ಯಾನ್ ಆನ್ ಇಂಡಿವಿಜ್ಯುಯಲ್ ಚಾಂಪಿಯನ್‌ಶಿಪ್ಸ್ 2020(ಎ.23-26).
ಯುರೋಪಿಯನ್ ಚಾಂಪಿಯನ್‌ಶಿಪ್ ಉಕ್ರೈನ್‌ನಲ್ಲಿ ಮತ್ತು ಏಶ್ಯ ಚಾಂಪಿಯನ್‌ಶಿಪ್ ಫಿಲಿಪ್ಪಿನ್ಸ್‌ನಲ್ಲಿ ನಿಗದಿಯಾಗಿತ್ತು. ಒಂದೊಮ್ಮೆ ಏಶ್ಯನ್ ಚಾಂಪಿಯನ್‌ಶಿಪ್‌ನ್ನು ಚೀನಾದ ವುಹಾನ್‌ನಿಂದ ಮನಿಲಾಕ್ಕೆ ಸ್ಥಳಾಂತರಿಸುವ ಚಿಂತನೆ ನಡೆದಿತ್ತು. ಭಾರತದ ಅಗ್ರಶ್ರೇಯಾಂಕದ ಆಟಗಾರರಾದ ಪಿ.ವಿ.ಸಿಂಧು , ಸೈನಾ ನೆಹ್ವಾಲ್, ಬಿ.ಸಾಯಿ ಪ್ರಣೀತ್ ಮತ್ತು ಕಿಡಂಬಿ ಶ್ರೀಕಾಂತ್ ಆಡುವ ನಿಟ್ಟಿನಲ್ಲಿ ಯೋಚಿಸಿದ್ದರು. ಬ್ಯಾಡ್ಮಿಂಟನ್ ಪ್ಯಾನ್ ಆಮ್ ಇಂಡಿವಿಜ್ಯುಯಲ್ ಟೂರ್ನಿ ಪೆರುವಿನಲ್ಲಿ ನಡೆಯಬೇಕಿತ್ತು. ಆದರೆ ಆರೋಗ್ಯ ಮತ್ತು ಸುರಕ್ಷೆತೆಯ ದೃಷ್ಟಿಯಿಂದ ಇದನ್ನು ರದ್ದುಪಡಿಸಲಾಗಿದೆ. ಎಲ್ಲ ಐದು ಟೂರ್ನಮೆಂಟ್‌ಗಳಲ್ಲಿ ಟೋಕಿಯೊ ಒಲಿಂಪಿಕ್ ಗೇಮ್ಸ್‌ಗೆ ಅರ್ಹತೆ ಪಡೆಯಲು ಆಟಗಾರರು ಉತ್ತಮ ಪ್ರದರ್ಶನ ನೀಡಬೇಕಿತ್ತು. ಆದರೆ ಆಟಗಾರರಿಗೆ ಭವಿಷ್ಯದ ಬಗ್ಗೆ ಆತಂಕ ಮೂಡಿದೆ.







