ಗಡಿಭಾಗ ಕಟ್ಟುನಿಟ್ಟು: ತುರ್ತು ಹೊರತುಪಡಿಸಿ ಎಲ್ಲಾ ವಾಹನಗಳು ವಾಪಸ್

ಉಳ್ಳಾಲ, ಮಾ.21:ಕೊರೋನ ವೈರಸ್ ಹರಡುವುದನ್ನು ತಡೆಗಟ್ಟಲು ಶನಿವಾರದಿಂದ ಕರ್ನಾಟಕ-ಕೇರಳ ಗಡಿ ಪ್ರದೇಶ ತಲಪಾಡಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು ಎಲ್ಲಾ ವಾಹನಗಳ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ.
ಕೇರಳದಲ್ಲಿ ಕೊರೋನ ಪ್ರಕರಣ ಹೆಚ್ಚಾಗಿರುವ ಕಾರಣ ಶನಿವಾರ ಬೆಳಗ್ಗಿನಿಂದಲೇ ಕೇರಳದಿಂದ ಮಂಗಳೂರಿಗೆ ಬರುವ ಹಾಗೂ ಮಂಗಳೂರಿನಿಂದ ಕೇರಳಕ್ಕೆ ಹೋಗುವ ಘನ ವಾಹನಗಳ ಸಂಚಾರಕ್ಕೆ ತಡೆ ಹೇರಲಾಗಿತ್ತು. ಇದರಿಂದಾಗಿ ಶನಿವಾರ ಕೆಎಲ್ ನೋಂದಣಿಯ ಬೆರಳೆಣಿಕೆಯ ಲಘು ವಾಹನಗಳು ತಲಪಾಡಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಂಡು ಬಂದವು. ಈ ಸಂದರ್ಭ ಗಡಿಭಾಗದಲ್ಲಿ ಉಭಯ ರಾಜ್ಯಗಳ ಸ್ಕ್ರೀನಿಂಗ್ ಮಾಡಲಾಗಿತ್ತು.
ಮಧ್ಯಾಹ್ನ 2 ಗಂಟೆಯ ಬಳಿಕ ಕೇರಳದಿಂದ ಮಂಗಳೂರಿಗೆ ಬರುವ ಎಲ್ಲಾ ವಾಹನಗಳ ಪ್ರವೇಶಕ್ಕೆ ನಿಷೇಧ ಹೇರಲಾಯಿತು. ಅದರಂತೆ ಕೇರಳದಿಂದ ಬರುವ ಹಾಗೂ ಕೇರಳಕ್ಕೆ ಹೋಗುವ ಎಲ್ಲಾ ವಾಹನಗಳನ್ನು ಉಭಯ ರಾಜ್ಯದ ಪೊಲೀಸರು ವಾಪಸ್ ಕಳುಹಿಸಿದರು.
ಅನಿಲ ಸಾಗಾಟ, ಆಂಬ್ಯುಲೆನ್ಸ್ ಸಹಿತ ಅಗತ್ಯ ಸೇವೆಗಳ ವಾಹನಗಳಿಗೆ ಮಾತ್ರ ಸಂಚಾರಕ್ಕೆ ಅವಕಾಶ ನೀಡಲಾಯಿತು. ಈ ವಾಹನಗಳ ಸವಾರರಿಗೆ ಯಾವುದೇ ರೀತಿಯ ಸ್ಕ್ರೀನಿಂಗ್ ಇರಲಿಲ್ಲ. ಉಭಯ ರಾಜ್ಯ ಸರಕಾರಗಳ ಕಟ್ಟುನಿಟ್ಟಿನ ಆದೇಶದಿಂದಾಗಿ ಕೇರಳಕ್ಕೆ ಹೋಗುವವರು ಕೆಳಗಿನ ತಲಪಾಡಿಯಿಂದ ಒಂದುವರೆ ಕಿ.ಮೀ.ವರೆಗೆ ನಡೆದು ಕೇರಳದ ವಾಹನ ಹತ್ತಿದರು. ಅದೇ ರೀತಿ ಕೇರಳದಿಂದ ಮಂಗಳೂರಿಗೆ ಹೋಗುವವರು ಮೇಲಿನ ತಲಪಾಡಿಗಿಂತಲೂ ಅರ್ದ ಕಿ.ಮೀ.ದೂರದಲ್ಲಿ ಇಳಿದು ಕೆಳಗಿನ ತಲಪಾಡಿವರೆಗೆ ನಡೆದರು. ಉಭಯ ರಾಜ್ಯಗಳಿಗೆ ವಾಹನ ಪ್ರವೇಶ ತಡೆಯುವ ನಿಟ್ಟಿನಲ್ಲಿ ಗಡಿಭಾಗದಲ್ಲಿ 2 ಗಂಟೆ ಬಳಿಕ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿತ್ತು.









