ಮಂಗಳೂರಿನಲ್ಲಿ ದಿನಸಿ ಸಾಮಾಗ್ರಿ ಖರೀದಿಸಲು ಮುಗಿಬಿದ್ದ ಜನತೆ
ರವಿವಾರ ಜನತಾ ಕರ್ಫ್ಯೂ ಹಿನ್ನೆಲೆ

ಮಂಗಳೂರು, ಮಾ.21:ರವಿವಾರ ಜನತಾ ಕರ್ಫ್ಯೂ ಘೋಷಣೆಯ ಹಿನ್ನೆಲೆಯಲ್ಲಿ ಮಂಗಳೂರು ನಗರ ವ್ಯಾಪ್ತಿಯಲ್ಲಿನ ಅಂಗಡಿ ಮಳಿಗೆಗಳಲ್ಲಿ ದಿನಬಳಕೆಯ ಸಾಮಾಗ್ರಿಗಳ ಖರೀದಿಗೆ ಜನ ಮುಗಿ ಬಿದ್ದ ದೃಶ್ಯ ನಗರದ ವಿವಿಧ ಕಡೆಗಳಲ್ಲಿ ಕಂಡು ಬಂತು.
ಕಳೆದ ಎರಡು ದಿನಗಳಿಂದ ಸಂಜೆಯ ವೇಳೆಗೆ ಜನಸಂಚಾರ ವಿರಳಗೊಂಡಿದ್ದು, ಶನಿವಾರದ ಪರಿಸ್ಥಿತಿ ಭಿನ್ನವಾಗಿತ್ತು. ಬಹುತೇಕ ಖಾಸಗಿ ಉದ್ಯಮ ಸಂಸ್ಥೆಗಳು ರವಿವಾರ ತಮ್ಮ ಸಂಸ್ಥೆಯ ಸಿಬ್ಬಂದಿಗಳಿಗೆ ರಜೆ ನೀಡಿದೆ. ನಗರದ ಸೆಂಟ್ರಲ್ ಮಾರ್ಕೆಟ್ ನಲ್ಲಿ ತರಕಾರಿ ಪಡೆಯಲು ಎಂದಿಗಿಂತ ಹೆಚ್ಚು ಗ್ರಾಹಕರು ನೆರೆದಿರುವುದು ಕಂಡು ಬಂತು. ಪಾಂಡೇಶ್ವರ, ರಥಬೀದಿ, ಉರ್ವಸ್ಟೋರ್, ಚಿಲಿಂಬಿ, ವೆಲೆನ್ಸಿಯ, ಸ್ಟೇಟ್ ಬ್ಯಾಂಕ್, ಕಂಕನಾಡಿ ಸೇರಿದಂತೆ ನಗರದ ದಿನಸಿ ಸಾಮಾಗ್ರಿಗಳ ಮಳಿಗೆಗಳಲ್ಲಿ ಕೈ ತೊಳೆಯುವ ದ್ರಾವಣ ವಿತರಣೆ ಹಾಗೂ ಸ್ಕ್ರೀನಿಂಗ್ ನಡೆಸುತ್ತಿರುವುದು ಕಂಡು ಬಂತು.









