ಕುಂದಾಪುರ: ಮೀನು ಉದ್ಯಮಿಯ ಕೊಲೆ ಯತ್ನ ಆರೋಪ; ನಾಲ್ವರ ಬಂಧನ

ಕುಂದಾಪುರ, ಮಾ.21: ಮೀನು ವ್ಯವಹಾರದ ಹಣಕಾಸಿನ ವಿಚಾರಕ್ಕೆ ಸಂಬಂಧಿಸಿ ಕುಂದಾಪುರದ ಉದ್ಯಮಿಯೊಬ್ಬರ ಕೊಲೆಗೆ ಯತ್ನಿಸಿದ ಪ್ರಕರಣದ ನಾಲ್ವರು ಆರೋಪಿಗಳನ್ನು ಕುಂದಾಪುರ ಪೊಲೀಸರು ಕ್ಷಿಪ್ರ ಕಾರ್ಯಾಚರಣೆಯ ಮೂಲಕ ಶುಕ್ರವಾರ ರಾತ್ರಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ಮಹಾರಾಷ್ಟ್ರ ರಾಜ್ಯದ ರತ್ನಗಿರಿಯ ದಾನೀಶ್ ಪಾಟೀಲ್ (34) ಹಾಗೂ ಆತನ ಸಹಚರರಾದ ಆಸೀಮ್ ಖಾಜಿ(39), ಮುಕದ್ದರ್ ಅಕ್ರಮ್(34), ಪ್ರಸಾದ್ ವಿಜಯ್ ರಾಯರಿಕರ್(47) ಎಂದು ಗುರುತಿಸಲಾಗಿದೆ. ಇವರಿಂದ ಕೃತ್ಯಕ್ಕೆ ಬಳಸಿದ ಝೈಲೋ ಕಾರು, 2 ಚೂರಿಗಳು, ಬಟನ್ ಚಾಕು, 2 ಸ್ಕ್ರೂ ಡ್ರೈವರ್‌ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಕುಂದಾಪುರ ಮರವಂತೆಯ ಮುಹಮ್ಮದ್ ಶಾಕೀರ್ ಎಂಬವರು ಎರಡು ವರ್ಷಗಳಿಂದ ರತ್ನಗಿರಿಯ ದಾನೀಶ್ ಪಾಟೀಲ್ ಎಂಬಾತನೊಂದಿಗೆ ಮೀನು ಖರೀದಿ ವ್ಯವಹಾರ ಮಾಡುತ್ತಿದ್ದರು. ಶಾಕೀರ್ 50 ಲಕ್ಷ ರೂ. ಹಣ ನೀಡಲು ಬಾಕಿ ಇದೆ ಎಂಬುದಾಗಿ ಶಾಕೀರ್ ಹಾಗೂ ಆತನ ತಂದೆಗೆ ದಾನೀಶ್ ಪಾಟೀಲ್ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದ ಎಂದು ಆರೋಪಿಸಲಾಗಿದೆ.
ಮಾ.20ರಂದು ಬೆಳಗ್ಗೆ ಕುಂದಾಪುರದ ಹಂಗಳೂರಿನಲ್ಲಿರುವ ಶಾಕೀರ್ ಅವರ ಫ್ಲ್ಯಾಟ್ ಬಳಿ ಬಂದ ದಾನೀಶ್ ಕೊಲೆ ಬೆದರಿಕೆ ಹಾಕಿದ್ದನು. ರಾತ್ರಿ ಶಾಕೀರ್ ಕುಂದಾಪುರ ಕಡೆಗೆ ತನ್ನ ಸ್ನೇಹಿತ ಸುಹೈಲ್ ಜೊತೆಗೆ ಕಾರಿನಲ್ಲಿ ಹೋಗುತ್ತಿರುವಾಗ ದಾನಿಶ್ ಹಾಗೂ ಆತನ ಸಹಚರರು ಕಾರನ್ನು ಅಡ್ಡಗಟ್ಟಿದ್ದು ಕಾರಿನಿಂದ ಇಳಿದ ಶಾಕೀರ್ ಅವರನ್ನು ಕೊಲೆಗೆ ಯತ್ನಿಸಿದ್ದರು ಎಂದು ಆರೋಪಿಸಲಾಗಿದೆ.
ಆರೋಪಿಗಳಿಂದ ತಪ್ಪಿಸಿಕೊಂಡು ಬಂದ ಶಾಕೀರ್, ಕುಂದಾಪುರ ಪೊಲೀಸ್ ಠಾಣೆಗೆ ಈ ಬಗ್ಗೆ ದೂರು ನೀಡಿದರು. ಕೂಡಲೇ ಕಾರ್ಯಪ್ರವೃತ್ತರಾದ ಕುಂದಾಪುರ ಪೊಲೀಸರು ಆರೋಪಿಗಳನ್ನು ಕೋಟೇಶ್ವರ ಬಳಿ ಬಂಧಿಸುವಲ್ಲಿ ಯಶಸ್ವಿಯಾದರು. ಉಡುಪಿ ಎಸ್ಪಿವಿಷ್ಣುವರ್ಧನ್, ಕುಂದಾಪುರ ಉಪವಿಭಾಗದ ಎಎಸ್ಪಿ ಹರಿರಾಂ ಶಂಕರ್, ವೃತ್ತ ನಿರೀಕ್ಷಕ ಗೋಪಿಕೃಷ್ಣ ಮಾರ್ಗದರ್ಶನದಲ್ಲಿ ಕುಂದಾಪುರ ಎಸ್ಸೈ ಹರೀಶ್ ಆರ್, ಎಎಸ್ಸೈ ಸುಧಾಕರ್, ಸಿಬ್ಬಂದಿಗಳಾದ ಮಂಜು, ಸಂತೋಷ್, ರಾಜು ನಾಯ್ಕ್, ರಾಘವೇಂದ್ರ, ಅಶ್ವಿನ್, ಶಾಂತರಾಮ, ರಾಮ ಗೌಡ, ಮಾರುತಿ, ರವಿ, ಶಂಕರ್, ರಾಘವೇಂದ್ರ ಮೊಗೇರ, ಸಚಿನ ಮತ್ತು ಪ್ರಸನ್ನ ಈ ಕಾರ್ಯಾಚರಣೆ ನಡೆಸಿದ್ದರು.







