ಫಾ.ಮಹೇಶ್ ಡಿಸೋಜ ಸಾವಿನ ಪ್ರಕರಣದ ತನಿಖಾ ವರದಿ ಸಲ್ಲಿಕೆ
ಉಡುಪಿ, ಮಾ.21: ಶಿರ್ವ ಚರ್ಚಿನ ಸಹಾಯಕ ಧರ್ಮಗುರು ಹಾಗೂ ಡೊನ್ ಬೊಸ್ಕೊ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲ ಫಾ.ಮಹೇಶ್ ಡಿಸೋಜ ಸಾವಿನ ಪ್ರಕರಣದ ತನಿಖೆ ನಡೆಸಿದ ಕಾಪು ವೃತ್ತ ನಿರೀಕ್ಷಕ ಮಹೇಶ್ ಪ್ರಸಾದ್, ಈ ಕುರಿತ ಅಂತಿಮ ವರದಿಯನ್ನು ಕುಂದಾಪುರ ಉಪ ವಿಭಾಗದ ಸಹಾಯಕ ಆಯುಕ್ತರಿಗೆ ಸಲ್ಲಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ತನಿಖಾಧಿಕಾರಿಗಳು ಒಟ್ಟು 95 ಸಾಕ್ಷಿಗಳ ವಿಚಾರಣೆ ನಡೆಸಿದ್ದು, ಅವುಗಳ ಆಧಾರದ ಮೇಲೆ ಇದು ಆತ್ಮಹತ್ಯೆ ಪ್ರಕರಣ ಎಂಬುದಾಗಿ ಸ್ಪಷ್ಟಪಡಿಸಲಾಗಿದೆ. ಶಾಲೆಯ ಸಾಲದ ಹೊರೆ, ಉಡುಪಿ ಧರ್ಮಪ್ರಾಂತ್ಯದ ಶಿಕ್ಷಣ ಮಂಡಳಿ, ಶಿರ್ವ ಚರ್ಚಿನ ಹಿರಿಯ ಧರ್ಮಗುರು, ಸಹಾಯಕ ಗುರು ಹಾಗೂ ಉಡುಪಿ ಧರ್ಮಪ್ರಾಂತದ ಬಿಷಪ್ ಈ ಸಾವಿಗೆ ಕಾರಣರಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ.
ವಂ. ಮಹೇಶ್ ಡಿಸೋಜರ ಆತ್ಮಹತ್ಯೆಗೆ ವ್ಯಕ್ತಿಯೊಬ್ಬರು ನೀಡಿದ ಅಪರಾಧಿಕ ದುಷ್ಪ್ರೇರಣೆ ಕಾರಣ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.ಹೀಗಾಗಿ ಸಾವಿಗೆ ನೇಣು ಹಾಕಿಕೊಂಡು ಆತ್ಮಹತ್ಯೆಯೇ ಹೊರತು ಬೇರೆ ಯಾವ ಕಾರಣಗಳು ಇಲ್ಲ ಎಂಬುದಾಗಿ ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸ್ ಇಲಾಖೆಯು ನಡೆಸಿದ ಈ ಸುದೀರ್ಘ ತನಿಖೆಯು ವಸ್ತು ನಿಷ್ಠವಾಗಿದ್ದು, ನಿಷ್ಪಕ್ಷಪಾತವೂ ಆಗಿದೆ. ಕಳೆದ ನಾಲ್ಕು ತಿಂಗಳುಗಳಿಂದ ಸಾಮಾ ಜಿಕ ಮಾಧ್ಯಮಗಳಲ್ಲಿ ಹರಿದಾಡಿದ ಸುಳ್ಳು ಸುದ್ಧಿಗಳು ಹಾಗೂ ಊಹಾಪೋಹಗಳಿಂದ ಉಡುಪಿ ಧರ್ಮಪ್ರಾಂತದ ಬಿಷಪ್, ಧರ್ಮಗುರುಗಳು, ಭಕ್ತಾಧಿಗಳು ಹಾಗೂ ಧರ್ಮಪ್ರಾಂತದ ವರ್ಚಸ್ಸಿಗೆ ಅತೀವ ಹಾನಿಯಾಗಿದ್ದು, ತನಿಖೆಯ ಈ ಅಂತಿಮ ವರದಿಯು ಇವುಗಳಿಗೆ ತೆರೆ ಎಳೆದಿದೆ ಎಂದು ಉಡುಪಿ ಧರ್ಮಪ್ರಾಂತ ಪ್ರಕಟಣೆಯಲ್ಲಿ ತಿಳಿಸಿದೆ.







