ಕಲಬುರಗಿ: ಕೊರೋನ ಇದೆ ಎಂದು ಅನುಮಾನಿಸಿ ಪ್ರಯಾಣಿಕನನ್ನು ರೈಲಿನಿಂದ ಕೆಳಗಿಳಿಸಿದರು !

ಸಾಂದರ್ಭಿಕ ಚಿತ್ರ
ಕಲಬುರಗಿ, ಮಾ.21: ಕೊರೋನ ಸೋಂಕು ಇದೆ ಎಂದು ಅನುಮಾನಿಸಿ ಪ್ರಯಾಣಿಕನನ್ನು ರೈಲಿನಿಂದ ಸಹ ಪ್ರಯಾಣಿಕರು ಕೆಳಗಿಳಿಸಿರುವ ಘಟನೆ ಸೇಡಂ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಹೈದರಾಬಾದ್ನಿಂದ ಮುಂಬೈಗೆ ಹೊರಟಿದ್ದ ಹುಸೇನ್ ಸಾಗರ್ ರೈಲಿನಲ್ಲಿ ತೆಲಂಗಾಣ ಮೂಲದ ಮೆಹಬೂಬನಗರ ನಿವಾಸಿ ನಾಗೇಶ ಕೃಷ್ಣಪ್ಪ ಎಂಬಾತ ಪುಣೆಗೆ ತೆರಳುತ್ತಿದ್ದ. ಈ ವೇಳೆ ಆತ ಅಸ್ವಸ್ಥನಂತೆ ಕಂಡ ಹಿನ್ನೆಲೆಯಲ್ಲಿ ಸಹ ಪ್ರಯಾಣಿಕರು ಆತನನ್ನು ಸೇಡಂ ರೈಲು ನಿಲ್ದಾಣದಲ್ಲಿ ಕೆಳಗಿಳಿಸಿ, ಸಿಆರ್ಪಿಎಫ್ ಸಿಬ್ಬಂದಿಗೆ ಒಪ್ಪಿಸಿದ್ದಾರೆ.
ವ್ಯಕ್ತಿಯನ್ನು ಕೆಳಗಿಳಿಸುತ್ತಿದ್ದಂತೆ ರೈಲು ನಿಲ್ದಾಣದಲ್ಲಿದ್ದ ಜನ ಗಾಬರಿಗೊಂಡಿದ್ದರು. ಕೂಡಲೇ ಸ್ಥಳೀಯ ವೈದ್ಯರನ್ನು ಸಂಪರ್ಕಿಸಿದ್ದಾರೆ. ಆದರೆ, ಕೊರೋನ ವೈರಸ್ ಸಂಬಂಧ ಪರೀಕ್ಷೆಗಾಗಿ ರೈಲು ನಿಲ್ದಾಣದಲ್ಲಿ ನೇಮಿಸಿದ್ದ ಸಿಬ್ಬಂದಿ ಸ್ಥಳದಲ್ಲಿ ಇಲ್ಲದ ಕಾರಣ ಅಲ್ಲಿ ನೆರೆದಿದ್ದವರಲ್ಲಿ ಮತ್ತಷ್ಟು ಆತಂಕ ಮನೆ ಮಾಡಿತ್ತು. ಕೆಲ ಹೊತ್ತಿನ ಬಳಿಕ ವೈದ್ಯರು ಆಗಮಿಸಿ ಅಸ್ವಸ್ಥ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿದರು ಎಂದು ತಿಳಿದುಬಂದಿದೆ.





