ಬೆಂಗಳೂರು: ಮಕ್ಕಳಿಬ್ಬರ ಹತ್ಯೆ ಪ್ರಕರಣ; ತಂದೆಗೆ ಗಲ್ಲು ಶಿಕ್ಷೆ

ಬೆಂಗಳೂರು, ಮಾ.21: ಮಕ್ಕಳಿಬ್ಬರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ಕೊಲೆಗೈದಿದ್ದ ಆರೋಪ ಪ್ರಕರಣ ಸಂಬಂಧ ಮಕ್ಕಳ ತಂದೆಗೆ ನಗರದ ಸಿವಿಲ್ ಮತ್ತು ಸತ್ರ ನ್ಯಾಯಾಲಯವು ಗಲ್ಲು ಶಿಕ್ಷೆ ವಿಧಿಸಿದೆ.
ಸುಬ್ರಮಣ್ಯಪುರದ ಸತೀಶ್ ಕುಮಾರ್ ತನ್ನ ಇಬ್ಬರು ಮಕ್ಕಳಾದ ಶಿವಶಂಕರ್ (5) ಹಾಗೂ ಆದಿತ್ಯ (4)ನನ್ನು ಕೊಲೆ ಮಾಡಿದ್ದು, ಆರೋಪಿಗೆ 45ನೆ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಇ.ರಾಜೀವ್‌ಗೌಡ ಅವರು ಮರಣ ದಂಡನೆ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
ಸಣ್ಣ ಮಕ್ಕಳನ್ನು ಕೊಲ್ಲುವುದು ಕ್ರೂರ ಅಪರಾಧವಾಗಿರುತ್ತದೆ. ಆರೋಪಿಯು ತನ್ನ ಇಬ್ಬರು ಮಕ್ಕಳನ್ನು ಕೊಲೆಗೈದು ಆ ಮಕ್ಕಳ ತಾಯಿಗೂ ಮಕ್ಕಳಿಗೆ ಕೊಡುವ ಪ್ರೀತಿಯನ್ನು ಕಿತ್ತುಕೊಂಡಿದ್ದಾನೆ ಎಂದು ತೀರ್ಮಾನಿಸಿ, ಮರಣ ದಂಡನೆ ಶಿಕ್ಷೆ ವಿಧಿಸಲಾಗಿದೆ ಎಂದು ನ್ಯಾಯಾಧೀಶರು ತಮ್ಮ ತೀರ್ಪಿನಲ್ಲಿ ತಿಳಿಸಿದ್ದಾರೆ.
ಸುಬ್ರಹ್ಮಣ್ಯಪುರದ ಆರೋಪಿ ಸತೀಶ್ ಕುಮಾರ್, ಜ್ಯೋತಿ ಎಂಬುವರನ್ನು ವಿವಾಹವಾಗಿದ್ದು, ದಂಪತಿಗೆ ಶಿವಕುಮಾರ್ ಹಾಗೂ ಆದಿತ್ಯ ಎಂಬ ಇಬ್ಬರು ಮಕ್ಕಳಿದ್ದರು. ಆರೋಪಿ ಮದ್ಯದ ಅಮಲಿನಲ್ಲಿ ಪತ್ನಿಯೊಂದಿಗೆ ಜಳಗವಾಡಿ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡುತ್ತಿದ್ದ. ಕಳೆದ 2016ರ ನ.15 ರಂದು ಆರೋಪಿ ಸತೀಶ್ ಕುಮಾರ್, ಕ್ಷುಲ್ಲಕ ಕಾರಣಕ್ಕೆ ಮಕ್ಕಳನ್ನು ಹತ್ಯೆಗೈದಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಸುಬ್ರಹ್ಮಣ್ಯಪುರ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು.
ತನಿಖಾಧಿಕಾರಿಗಳಾದ ಪ್ರಕಾಶ್ ರಾಥೋಡ್, ಕೆಂಪೇಗೌಡ ಹಾಗೂ ನಿವೃತ್ತ ಎಎಸ್ಸೈ ಶಂಕರಪ್ಪ ನೇತೃತ್ವದ ತಂಡ ಸೂಕ್ತ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಪ್ರಕರಣದಲ್ಲಿ ಸರಕಾರಿ ಅಭಿಯೋಜಕ ಡಿ.ವೈ.ಕೆಂಭಾ ಅವರು ಸರಕಾರದ ಪರವಾಗಿ ವಾದ ಮಂಡಿಸಿದ್ದರು ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.







