ಕೊರೋನ ಎಫೆಕ್ಟ್: ಕೆಎಸ್‌ಆರ್‌ಟಿಸಿಗೆ ಆದ ನಷ್ಟ ಎಷ್ಟು ಕೋಟಿ ರೂ. ಗೊತ್ತಾ ?

ಬೆಂಗಳೂರು, ಮಾ.21: ಮಾರಕ ಕೊರೋನ ಸೋಂಕಿನ ಭೀತಿಯ ಹಿನ್ನೆಲೆಯಲ್ಲಿ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದ್ದು, ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ 13 ಕೋಟಿ ರೂ.ಗೂ ಹೆಚ್ಚು ನಷ್ಟವಾಗಿದೆ.
ಮಾ.1ರಿಂದ ನಿನ್ನೆಯವರೆಗೆ ಕೆಎಸ್‌ಆರ್‌ಟಿಸಿ ಬಸ್ ಪ್ರಯಾಣದಲ್ಲಿ ವ್ಯತ್ಯಯ ಉಂಟಾಗಿದ್ದರಿಂದ 13,35,33,520 ರೂಪಾಯಿ ನಷ್ಟವಾಗಿದೆ. ಶುಕ್ರವಾರ ಒಂದೇ ದಿನ ಎರಡೂವರೆ ಕೋಟಿ ರೂ.ಗೂ ಹೆಚ್ಚು ನಷ್ಟ ಉಂಟಾಗಿದೆ ಅಧಿಕೃತ ಪ್ರಕಟಣೆ ತಿಳಿಸಿದೆ.
ಕಾಯ್ದಿರಿಸಿದ ಟಿಕೇಟ್ ರದ್ಧತಿ, ಬಸ್ ಸಂಚಾರ ಸ್ಥಗಿತ ಮತ್ತಿತರ ಕಾರಣಗಳಿಂದ ಈ ನಷ್ಟ ಉಂಟಾಗಿದೆ. ಕೊರೋನ ಪಿಡುಗನ್ನು ತಡೆಗಟ್ಟುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮಾ.22ರಂದು ಜನತಾ ಕರ್ಫ್ಯೂ ಆಚರಿಸಲು ಕರೆಕೊಟ್ಟಿರುವ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಈಶಾನ್ಯ ಹಾಗೂ ವಾಯವ್ಯ ಸಂಸ್ಥೆಗಳ ಸಂಚಾರದಲ್ಲಿ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಮತ್ತು ಪ್ರಯಾಣಿಕರು ಸಹಕರಿಸಬೇಕೆಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಮನವಿ ಮಾಡಿದ್ದಾರೆ.
ಮಾ.22ರಂದು ಜನತಾ ಕರ್ಫ್ಯೂ ಸಂದರ್ಭದಲ್ಲಿ ಬಸ್ ಸಂಚಾರದಲ್ಲಿ ಅಗತ್ಯ ಸೇವೆ ಒದಗಿಸುವುದರೊಂದಿಗೆ ಕೆಲವು ಬಸ್‌ಗಳ ಸಂಚಾರವನ್ನು ಕಡಿಮೆಗೊಳಿಸಲು ನಿರ್ಧರಿಸಲಾಗಿದೆ. ಕೊರೋನ ವೈರಸ್ ಅಪಾಯ ಮಟ್ಟ ತಲುಪುವುದಕ್ಕಿಂತ ಮುಂಚೆ ನಮ್ಮಲ್ಲಿ ಹೆಚ್ಚೆಚ್ಚು ಮುಂಜಾಗ್ರತೆ ಕೈಗೊಳ್ಳುವುದು ಅಗತ್ಯವಾಗಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಸಮನ್ವಯತೆಯೊಂದಿಗೆ ಸಾಕಷ್ಟು ಕ್ರಮಗಳನ್ನು ಕೈಗೊಂಡಿರುವುದರಿಂದ ಸೋಂಕು ಹರಡುವುದು ನಿಯಂತ್ರಣದಲ್ಲಿದೆ.
ಇನ್ನು ಮುಂದೆಯೂ ಪರಿಣಾಮಕಾರಿಯಾಗಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದು ಅಷ್ಟೇ ಅವಶ್ಯಕವಾಗಿದ್ದು, ಸ್ವಯಂ ಆಚರಣೆಯಿಂದ ಜನತಾ ಕರ್ಫ್ಯೂ ಆಚರಿಸಲು ಸರ್ವರು ಪಾಲ್ಗೊಳ್ಳುವುದು ಅಗತ್ಯ ಎಂದಿದ್ದಾರೆ.
ಕೊರೋನ ವೈರಸ್ ಹರಡದಂತೆ ನಿಯಂತ್ರಿಸಲು ಸಾರಿಗೆ ಸಂಸ್ಥೆಗಳ ಬಸ್ಸುಗಳಲ್ಲಿ ಹೆಚ್ಚಿನ ಸ್ವಚ್ಛತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಬಸ್ ನಿಲ್ದಾಣಗಳಲ್ಲಿಯೂ ಸ್ವಚ್ಛತೆ ಕಾಪಾಡುವುದು ಸೇರಿದಂತೆ ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಎಲ್ಲ ಪ್ರಯತ್ನಗಳು ಸಫಲವಾಗಲು ಸಾರ್ವಜನಿಕರು ಹಾಗೂ ಪ್ರಯಾಣಿಕರು ಸಹಕಾರ ನೀಡಬೇಕೆಂದು ಪ್ರಕಟಣೆಯಲ್ಲಿ ಉಪಮುಖ್ಯಮಂತ್ರಿ ಕೋರಿದ್ದಾರೆ.







