ಕೊರೋನ ಚಿಕಿತ್ಸೆಗೆ ಉಡುಪಿ ಜಿಲ್ಲಾಡಳಿತ ಸಿದ್ಧತೆ: ಶೋಭಾ ಕರಂದ್ಲಾಜೆ

ಉಡುಪಿ, ಮಾ.21: ಕೊರೋನಗೆ ಸಂಬಂಧಿಸಿ ತುರ್ತುಸ್ಥಿತಿಯಲ್ಲಿ ಉಡುಪಿ ಡಾ.ಟಿಎಂಎ ಪೈ ಆಸ್ಪತ್ರೆಯನ್ನು ಬಿಟ್ಟು ಕೊಡುವುದಾಗಿ ಮಣಿಪಾಲ ಮಾಹೆಯವರು ಭರವಸೆ ನೀಡಿದ್ದಾರೆ. ಉಡುಪಿ ಎಸ್‌ಡಿಎಂ ಆಯುರ್ವೇದ ಆಸ್ಪತ್ರೆಯವರು 150 ಬೆಡ್‌ಗಳನ್ನು ನೀಡುವುದಾಗಿ ತಿಳಿಸಿದ್ದಾರೆ.
ಅಗತ್ಯ ಬಿದ್ದರೆ ಮಣಿಪಾಲದಲ್ಲಿರುವ ಅಂತಾರಾಷ್ಟ್ರೀಯ ಹಾಸ್ಟೆಲ್‌ಗಳನ್ನು ನೀಡುವಂತೆಯೂ ಕೂಡ ಕೇಳಿಕೊಳ್ಳಲಾಗಿದೆ. ಈ ವೈರಸ್ ಪತ್ತೆಯಾದ ವ್ಯಕ್ತಿಗೆ ತಕ್ಷಣ ಚಿಕಿತ್ಸೆ ನೀಡಲು ಎಲ್ಲ ರೀತಿಯ ಸಿದ್ಧತೆಯನ್ನು ಜಿಲ್ಲಾಡಳಿತ ನಡೆಸಿದೆ ಎಂದು ಉಡುಪಿ ಚಿಕ್ಕಮಗಳೂರು ಸಂದೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
ಉಡುಪಿ ಇಂದ್ರಾಳೆ ರೈಲ್ವೆ ನಿಲ್ದಾಣದಲ್ಲಿ ಸ್ಥಾಪಿಸಿರುವ ಪ್ರಯಾಣಿಕರ ಕೈ ತೊಳೆಯುವ ವಾಶ್‌ಬೇಸಿನ್‌ಗೆ ಇಂದು ಚಾಲನೆ ನೀಡಿ ಅವರು ಮಾಧ್ಯಮದವರೊಂದಿಗೆ ಮಾತನಾಡುತಿದ್ದರು.
ಕೊರೋನ ವೈರಸ್ ವಿರುದ್ಧ ಹೋರಾಟ ನಡೆಸಲು ಕೇಂದ್ರ ಹಾಗೂ ರಾಜ್ಯ ಸರಕಾರ ಸಿದ್ಧಗೊಂಡಿದ್ದು, ಜನತಾ ಕರ್ಫ್ಯೂವಿನ ಉದ್ದೇಶ ನಮಗೆ ನಾವೇ ನಿಯಂತ್ರಣ ಹೇರಿ, ಮನೆಯಲ್ಲಿ ಇರಬೇಕು ಎಂಬುದಾಗಿದೆ. ಉಡುಪಿ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿರುವ ಎಲ್ಲ ಸಾರ್ವಜನಿಕರ ಸ್ಥಳಗಳಾದ ರೈಲ್ವೆ, ಬಸ್ ನಿಲ್ದಾಣ, ಜಿಲ್ಲಾಧಿಕಾರಿ ಕಚೇರಿಗಳಲ್ಲಿ ಸಾರ್ವಜನಿಕರಿಗೆ ಕೈತೊಳೆಯಲು ವ್ಯವಸ್ಥೆ ಮಾಡಲಾಗಿದೆ ಎಂದರು.
ಉಡುಪಿ ಜಿಲ್ಲೆಗೆ ಈವರೆಗೆ ವಿದೇಶದಿಂದ ಆಗಮಿಸಿದ 448 ಮಂದಿಯನ್ನು ಮತ್ತು ಅವರ ಕುಟುಂಬದವರನ್ನು ಜಿಲ್ಲಾಡಳಿತ ಗುರುತು ಮಾಡಿದ್ದು, ಅವರಲ್ಲಿ 35 ಮಂದಿಯನ್ನು 28 ದಿನಗಳ ಕಾಲ ನಿರ್ಬಂಧದಲ್ಲಿ ಇರಿ ನಿಗಾ ವಹಿಸ ಲಾಗಿದೆ. ಇಂದು 84 ಮಂದಿಯನ್ನು ಮತ್ತೆ ಗೃಹ ನಿರ್ಬಂಧದಲ್ಲಿ ಇರಿಲಾಗಿದೆ ಎಂದು ಅವರು ಹೇಳಿದರು.
ಉಡುಪಿ ಅಥವಾ ಮಣಿಪಾಲದಲ್ಲಿ ಪ್ರಯೋಗಾಲಯವನ್ನು ಸ್ಥಾಪಿಸುವಂತೆ ಮುಖ್ಯಮಂತ್ರಿ ಹಾಗೂ ಕೇಂದ್ರ ಆರೋಗ್ಯ ಇಲಾಖೆಗೆ ಪತ್ರ ಬರೆದಿದ್ದೇನೆ. ಆದಷ್ಟು ಬೇಗ ಆಗಬಹುದು ಎಂಬ ವಿಶ್ವಾಸ ಇದೆ. ರೋಗಿಗಳಿಗೆ ಬೇಕಾದ ಮಾಸ್ಕ್‌ಗಳು ಹಾಗೂ ಸ್ಯಾನಿಟೈಸರ್‌ಗಳನ್ನು ಒದಗಿಲು ಜಿಲ್ಲಾಡಳಿತ ಸಜ್ಜಾಗಿದೆ ಎಂದರು.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾಧಿಕಾರಿ ಜಗದೀಶ್, ಶಾಸಕ ಕೆ.ರಘುಪತಿ ಭಟ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್ ಚಂದ್ರ ಸೂಡ, ಕೊಂಕಣ ರೈಲ್ವೆ ಸಾರ್ವಜನಿಕ ಸಂಪರ್ಕ ವ್ಯವಸ್ಥಾಪಕಿ ಸುಧಾ ಕೃಷ್ಣಮೂರ್ತಿ, ಮುಖ್ಯ ಆರೋಗ್ಯ ಅಧಿಕಾರಿ ಡಾ.ಸ್ಟಿವನ್ ಜಾರ್ಜ್, ಸಹಾಯಕ ಸಂಚಾರಿ ವ್ಯವಸ್ಥಾಪಕ ದರ್ಶನ್ ಠಾಕೂರು, ಬಿಜೆಪಿ ಜಿಲ್ಲಾಧ್ಯಕ್ಷ ಸುರೇಶ್ ನಾಯಕ್ ಕುಯಿಲಾಡಿ ಮೊದಲಾದವರು ಉಪಸ್ಥಿತರಿದ್ದರು.
ಬಳಿಕ ಸಂಸದರು ಉಡುಪಿ ಸಿಟಿ ಬಸ್ ನಿಲ್ದಾಣ, ಕೆಎಸ್‌ಆರ್‌ಟಿಸಿ ಹಾಗೂ ಸರ್ವಿಸ್ ಬಸ್ ನಿಲ್ದಾಣದಲ್ಲಿಯೂ ಕೊರೋನ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದರು ಮತ್ತು ಜನತಾ ಕರ್ಫ್ಯೂವನ್ನು ಬೆಂಬಲಿಸುವಂತೆ ಮನವಿ ಮಾಡಿ ದರು.







