ಕೊಡವೂರು ವಾರ್ಡ್ ವ್ಯಾಪ್ತಿಯ 20 ಕೆರೆಗಳ ಅಭಿವೃದ್ಧಿಗೆ ಸಂಕಲ್ಪ

ಮಲ್ಪೆ, ಮಾ.21: ಕೊಡವೂರು ವಾರ್ಡ್ ಅಭಿವೃದ್ಧಿ ಸಮಿತಿಯ ವತಿಯಿಂದ ಇತ್ತೀಚೆಗೆ ಕೊಡವೂರು ವಿಪ್ರಶ್ರೀ ಸಭಾಭವನದಲ್ಲಿ ನಡೆದ ಜಲ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಒಟ್ಟು 18 ಸಂಘಟನೆಗಳು ವಾರ್ಡ್ ವ್ಯಾಪ್ತಿ ಯಲ್ಲಿರುವ ಸುಮಾರು 20 ಕೆರೆಗಳನ್ನು ಅಭಿವೃದ್ದಿ ಪಡಿಸುವ ಬಗ್ಗೆ ಸಂಕಲ್ಪ ಮಾಡಿತು.
ಇದೇ ಸಂದರ್ಭದಲ್ಲಿ ನಡೆದ ಮದಗ-ಕೆರೆ-ಕಲ್ಯಾಣಿ ಉಳಿಸೋಣ ಸಂವಾದ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಉಪನ್ಯಾಸಕ ಡಾ. ನಾರಾಯಣ ಶೆಣೈ ಮಾತನಾಡಿ, ಪ್ರಸ್ತುತ ದೇಶ ಜಲಸಂಬಂಧಿ ವಿದ್ಯಾಮಾನ ಗಳು ಆತಂಕಕಾರಿಯಾಗಿದೆ. ಕೆಲವೊಂದು ಅಂಕಿಅಂಶವನ್ನು ಪ್ರಕಾರ ಮುಂದಿನ 30ವರ್ಷದೊಳಗೆ ದೇಶದ ಬಹುತೇಕ ಭಾಗಗಳಲ್ಲಿ ನೀರೇ ಸಿಗದಂತಹ ಸ್ಥಿತಿ ಉದ್ಭವವಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಕಳೆದ ದಶಕದಲ್ಲಿ ಸುಮಾರು 2.57ಲಕ್ಷ ರೈತರು ನಮ್ಮ ದೇಶದಲ್ಲಿ ಆತ್ಮಹತ್ಯೆ ಮಾಡಿದ್ದಾರೆ. ಸ್ವಾತಂತ್ರ್ಯದ ಅನಂತರ ನೀರಿಗಾಗಿ 2,92,767 ಕೋಟಿ ರೂ.ಗಳನ್ನು ವ್ಯಯಿಸಲಾಗಿದೆ. ನಮ್ಮ ದೇಶದಲ್ಲಿ ಸುಮಾರು 4 ಕೋಟಿ ವಿದ್ಯುತ್ ಚಾಲಿತ ಕೊಳವೆ ಮತ್ತು ತೆರೆದ ಬಾವಿಗಳಿವೆ. ಸ್ವಾತಂತ್ರ್ಯ ದೊರೆತ ನಂತರ 5ಕೋಟಿ ಜನರು ನೀರಿನಿಂದ ಹರಡುವ ರೋಗಗಳಿಂದಾಗಿ ಸಾವನ್ನಪ್ಪಿದ್ದಾರೆ ಎಂದರು.
ಪವಿತ್ರ ಗಂಗಾನದಿಗೆ ದಿನವೊಂದಕ್ಕೆ 134 ಕೋಟಿ ಲೀಟರ್ ತ್ಯಾಜ್ಯ ಬಂದು ಬೀಳುತ್ತಿದೆ. ಗುಜರಾತ್, ದಕ್ಷಿಣ ರಾಜಸ್ಥಾನ, ಸೌರಾಷ್ಟ್ರ, ತಮಿಳುನಾಡಿನ ಕೊಯಂಬತ್ತೂರು ಮತ್ತು ಮದುರೆ ಜಿಲ್ಲೆಗಳಲ್ಲಿ ಹಾಗೂ ಕರ್ನಾಟಕದ ಕೋಲಾರ, ಆಂಧ್ರಪ್ರದೇಶದ ರಾಯಲ ಸೀಮೆ, ಹರ್ಯಾಣ ಮತ್ತು ಪಂಜಾಬ್ ಪ್ರಾಂತ್ಯದ ಬಹುತೇಕ ಕಡೆಗಳಲ್ಲಿ ಅಂತರ್ಜಲದ ಮಟ್ಟ ಕುಸಿಯುತ್ತಿದೆ. ದೇಶದ 68 ಭೂಭಾಗ ಬರ ಪೀಡಿತವೆಂದು ಘೋಷಿಸಲ್ಪಟ್ಟಿದೆ. ಕರ್ನಾಟಕ ರಾಜ್ಯದ 65 ತಾಲೂಕುಗಳು ಅಂತರ್ಜಲವನ್ನು ಮಿತಿ ಮೀರಿ ಬಳಸುವ ತಾಲೂಕು ಗಳೆಂದು ಗುರುತಿಸಲ್ಪಟ್ಟಿವೆ.
ರಾಜ್ಯದ 17 ತಾಲೂಕುಗಳಲ್ಲಿ ಪರಿಸ್ಥಿತಿಯು ಬಹಳಷ್ಟು ಗಂಭೀರವಾಗಿ ಎಂದು ಅವರು ತಿಳಿಸಿದರು.
ಜಲ ಸಂರಕ್ಷಣೆಯ ಕುರಿತಾಗಿ ಸರಿಯಾದ ಜ್ಞಾನವಿಲ್ಲದರ ಪರಿಣಾಮವಾಗಿ ನಾವು ಇಂದು ನೀರಿನ ಕೊರತೆಯನ್ನು ಎದುರಿಸುತ್ತಿದ್ದೇವೆ. ವರ್ಷದಿಂದ ವರ್ಷಕ್ಕೆ ತೀವ್ರ ಬರಪೀಡಿತವಾಗುತ್ತಿದ್ದು ಜನತೆಯಲ್ಲಿ ಜಲಪ್ರಜ್ಞೆಯ ಹಾಗೂ ಸಾಮುದಾಯಿಕ ನಿರ್ವಹಣೆಯ ಕೊರತೆಯಿಂದ ರಾಜ್ಯವು ನೀರಿನ ಕೊರತೆಯನ್ನು ಅನುಭವಿಸುತ್ತಿದೆ ಎಂದು ಡಾ.ನಾರಾಯಣ ಶೆಣೈ ಹೇಳಿದರು.
ಕೊಡವೂರು ವಾರ್ಡ್ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಪ್ರಭಾತ್ ಕೊಡವೂರು, ಕೃಷಿಕ ಸಂತೋಷ್ ಶೆಟ್ಟಿ ಪಂಚರತ್ನಾ ಮೊದಲಾದವರು ಉಪಸ್ಥಿತರಿದ್ದರು. ನಗರಸಭಾ ಸದಸ್ಯ ವಿಜಯ ಕೊಡವೂರು ಸ್ವಾಗತಿಸಿ, ವಂದಿಸಿದರು.







