ಮಂಗಳೂರು: ಮಾ.22ರಂದು ಏನಿದೆ... ಏನಿಲ್ಲ
ಮಂಗಳೂರು, ಮಾ.21: ಕೊರೋನ ವೈರಸ್ ಭೀತಿಯ ಹಿನ್ನಲೆಯಲ್ಲಿ ಮಾ.22ರಂದು ಪ್ರಧಾನಿ ನರೇಂದ್ರ ಮೋದಿಯ ಕರೆಯಂತೆ ಜನತಾ ಕರ್ಫ್ಯೂಗೆ ಪೂರಕವಾಗಿ ದ.ಕ. ಜಿಲ್ಲೆಯಲ್ಲಿ ಯಾವುದೇ ಸರಕಾರಿ, ಖಾಸಗಿ ಬಸ್ಸುಗಳು ರಸ್ತೆಗಿಳಿಯುವುದಿಲ್ಲ. ಅನೇಕ ಸಂಘಟನೆಗಳ ರಿಕ್ಷಾ-ಟ್ಯಾಕ್ಸಿ ಸೇವೆ ರದ್ದಾಗಲಿದೆ. ಹೊಟೇಲ್‌ಗಳು, ಪೆಟ್ರೋಲ್ ಬಂಕ್‌ಗಳು ಕಾರ್ಯಾಚರಿಸುವುದಿಲ್ಲ. ಮಾರುಕಟ್ಟೆಗಳು, ಅಂಗಡಿ ಮುಂಗಟ್ಟುಗಳು ಕೂಡ ಮುಚ್ಚಲಿವೆ.
ವಾರದ ಹಿಂದೆಯೇ ಜಿಲ್ಲೆಯ ಎಲ್ಲ ಮಾಲ್, ಮಲ್ಟಿಪ್ಲೆಕ್ಸ್‌ಗಳ ಸಹಿತ ಜನರು ಹೆಚ್ಚು ಸೇರುವ ಪ್ರದೇಶಗಳೆಲ್ಲವೂ ಬಂದ್ ಆಗಿವೆ. ಕಾರ್ಯಕ್ರಮಗಳು ಕೂಡ ರದ್ದಾಗಿವೆ. ಸರಕಾರಿ ಬಸ್ಸುಗಳು ಬೆಳಗ್ಗೆ 7ರಿಂದ ಸಂಜೆ 5ರವರೆಗೆ ಓಡಾಟ ನಡೆಸುವುದಿಲ್ಲ. ಸಂಜೆ 5ರ ಬಳಿಕ ಅಗತ್ಯವಿರುವ ಕಡೆ ಕೆಲವು ಬಸ್‌ಗಳನ್ನು ಮಾತ್ರ ಓಡಿಸಲಾಗುವುದು ಎಂದು ಕೆಎಸ್ಸಾರ್ಟಿಸಿ ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ. ಅತ್ತ ಕೇರಳದಿಂದ ಎಲ್ಲ ರಸ್ತೆಗಳನ್ನು ಬಂದ್ ಮಾಡಿರುವುದರಿಂದ ಕೇರಳ ರಾಜ್ಯ ಸರಕಾರಿ ಬಸ್ಸುಗಳು ಮಂಗಳೂರಿಗೆ ಬರಲು ಅವಕಾಶವಿಲ್ಲ.
ಆಸ್ಪತ್ರೆಗಳಲ್ಲಿ ತುರ್ತು ಸೇವೆ ಲಭ್ಯವಿದೆ. ಆ್ಯಂಬುಲೆನ್ಸ್ ಸಹಿತ ತುರ್ತು ಸಾಗಾಟದ ವಾಹನಗಳ ಸೇವೆಗಳಿಗೆ ಯಾವುದೇ ಸಮಸ್ಯೆಯಿಲ್ಲ. ಹಾಲು, ಪತ್ರಿಕೆಗಳ ಮಾರಾಟಕ್ಕೆ ಅಡ್ಡಿಯಿಲ್ಲ.





