ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೊರೋನ ಪತ್ತೆಯಾಗಿಲ್ಲ: ಉಸ್ತುವಾರಿ ಸಚಿವ ಸಿಟಿ ರವಿ ಸ್ಪಷ್ಟನೆ

ಚಿಕ್ಕಮಗಳೂರು, ಮಾ.21: ಜಿಲ್ಲೆಯಲ್ಲಿ ಈವರೆಗೆ ಕೊರೋನ ವೈರಸ್ ಪ್ರಕರಣ ಕಂಡುಬಂದಿಲ್ಲ. ಆದರೆ, ಲಕ್ಷಣಗಳುಳ್ಳ 4 ಪ್ರಕರಣಗಳು ದಾಖಲಾಗಿದ್ದು, ರಕ್ತ ಪರೀಕ್ಷೆಯ ಮೂಲಕ ಕೊರೋನ ವೈರಸ್ ಇಲ್ಲದಿರುವುದು ದೃಢಪಟ್ಟಿದೆ. ಹಾಗೂ 128 ಜನರನ್ನು ಪರೀಕ್ಷೆ ಮಾಡಲಾಗಿದೆ. ಈ ವೈರಸ್ ಹರಡದಂತೆ ಜಿಲ್ಲೆ, ತಾಲೂಕು, ಹೋಬಳಿ ಮಟ್ಟದಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಯುವ ಸಬಲೀಕರಣ ಮತ್ತು ಕ್ರೀಡೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಹೇಳಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕೊರೋನ ವೈರಸ್ ಕುರಿತು ಕೈಗೊಂಡ ಕ್ರಮಗಳ ಬಗ್ಗೆ ಅಂತರ್ ಇಲಾಖಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕೊರೋನ ವೈರಸ್ ಅನ್ನು ತಡೆಗಟ್ಟಲು ಸಾರ್ವಜನಿಕರು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಸ್ವಯಂ ನಿರ್ಬಂಧವನ್ನು ಹಾಕಿಕೊಳ್ಳಬೇಕು ಎಂದು ಮನವಿ ಮಾಡಿದರು.
ಸಾರ್ವಜನಿಕರ ಹಿತದೃಷ್ಟಿಯಿಂದ ಚಲನಚಿತ್ರ ಮಂದಿರ, ಕೋಚಿಂಗ್ ಸೆಂಟರ್, ಕ್ರೀಡಾಂಗಣ, ಜಾತ್ರೆ, ಸಭೆ-ಸಮಾರಂಭ, ಸಂತೆ, ಹಾಗೂ ಧಾರ್ಮಿಕ ಸ್ಥಳಗಳಲ್ಲಿ ಸಾರ್ವಜನಿಕರು ಹೆಚ್ಚಾಗಿ ಸೇರುವುದರಿಂದ ಅಂತಹ ಸ್ಥಳಗಳನ್ನು ನಿರ್ಬಂಧಿಸಿ, ಅವಶ್ಯಕತೆ ಇರುವ ಕಡೆ 5 ಜನರಿಗಿಂತ ಹೆಚ್ಚು ಜನರು ಸೇರದಂತೆ ಕ್ರಮವಹಿಸಬೇಕು ಹಾಗೂ ಸಾರ್ವಜನಿಕರು ಸ್ವಯಂ ನಿರ್ಬಂಧಗಳನ್ನು ಹಾಕಿಕೊಂಡು ಎಚ್ಚರದಿಂದ ಇರಬೇಕು ಎಂದು ನಿರ್ದೇಶಿಸಿದರು.
ಸಾರ್ವಜನಿಕ ಶೌಚಾಲಯಗಳಲ್ಲಿ ಸ್ಯಾನಿಟೈಸರ್‌ಗಳನ್ನು ಬಳಸಬೇಕು. ನಗರ ಸಭೆಯವರು ಆಗ್ಗಿಂದಾಗೆ ಶೌಚಾಲಯಗಳ್ನು ಶುಚಿಗೊಳಿಸಬೇಕು. ನಗರಗಳಲ್ಲಿ ಬಾರ್, ರೆಸ್ಟೋರೆಂಟ್ ಹಾಗೂ ಹೋಂಸ್ಟೇಗಳನ್ನು ನಿರ್ಬಂಧಿಸಬೇಕು ಮತ್ತು ನಗರಸಭೆ, ಟಿ.ಎಂ.ಸಿ ಮತ್ತು ಸಿ.ಎಂ.ಸಿ ಗಳು ಒಂದು ವಾರಗಳ ಕಾಲ ಬೀದಿ ಬದಿ ತಿಂಡಿ ಅಂಗಡಿಗಳನ್ನು ಮುಚ್ಚಿಸಿ ಹೆಚ್ಚಿನ ಕ್ರಮ ಕೈಗೊಳ್ಳಬೇಕು ಎಂದು ಆದೇಶಿಸಿದರು.
ಕೊರೋನ ವೈರಸ್ ಪ್ರಕರಣಗಳು ಹೆಚ್ಚಾದರೆ ಆ ವೇಳೆ ಖಾಸಗಿ ಆಸ್ಪತ್ರೆಗಳಲ್ಲಿಯೂ ಚಿಕಿತ್ಸಾ ಸೌಲಭ್ಯಗಳನ್ನು ಅಳವಡಿಸಬೇಕು. ಸಾರ್ವಜನಿಕರ ಹಿತದೃಷ್ಟಿಯಿಂದ ತಾಲೂಕು ಹಾಗೂ ಹೋಬಳಿ ಮಟ್ಟದಲ್ಲಿ 1077, 112, 104 ಸಂಖ್ಯೆಯ ತುರ್ತು ಸಹಾಯವಾಣಿ ಒದಗಿಸಲಾಗಿದ್ದು, ಮನೆಯಲ್ಲಿಯೇ ಚಿಕಿತ್ಸೆ ಪಡೆಯುವ ಸೌಲಭ್ಯವನ್ನೂ ನೀಡಲಾಗಿದೆ. ಆರೋಗ್ಯ ಇಲಾಖೆ ಅಧಿಕಾರಿಗಳು ಸಾರ್ವಜನಿಕರಿಗೆ ಶೀಘ್ರ ಸ್ಪಂದಿಸಬೇಕು. ಮುಖ್ಯವಾಗಿ ವೈದ್ಯರು ಅವಶ್ಯಕ ಜಾಗರೂಕರಾಗಿ ಮುನ್ನೆಚ್ಚರಿಕಾ ಕ್ರಮಗಳನ್ನು ಅಳವಡಿಸಿಕೊಂಡು ಕಾರ್ಯ ನಿರ್ವಹಿಸಬೇಕು ಎಂದು ವೈದ್ಯರಿಗೆ ಸೂಚಿಸಿದರು.
ಸಭೆಯಲ್ಲಿ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ, ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಪೂವಿತಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರೀಶ್ ಪಾಂಡೆ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಅನ್ಯ ರಾಜ್ಯ, ಜಿಲ್ಲೆಯ ಪ್ರವಾಸಿಗಳಿಗೆ ನಿರ್ಬಂಧ
ಹೊರ ದೇಶ, ರಾಜ್ಯ ಹಾಗೂ ಜಿಲ್ಲೆಗಳಿಂದ ಬರುವ ಪ್ರವಾಸಿಗರನ್ನು ನಿರ್ಬಂಧಿಸಲಾಗಿದೆ. ಚೆಕ್ ಪೋಸ್ಟ್‌ಗಳಲ್ಲಿ ಬೇರೆ ರಾಜ್ಯಗಳಿಂದ ಬರುವ ವಾಹನಗಳನ್ನು ತಪಾಸಣೆಗೊಳಪಡಿಸಬೇಕು. ಧಾರ್ಮಿಕ ಸ್ಥಳಗಳಲ್ಲಿ ನಡೆಯುವ ಪೂಜೆ, ಸಮಾರಂಭಗಳನ್ನು ಮುಂದೂಡಿ ಸಾರ್ವಜನಿಕರು ಸೇರುವುದನ್ನು ತಡೆಗಟ್ಟಬೇಕು. ರಾಜ್ಯ ಮಟ್ಟದಲ್ಲಿ ಅಧಿಕಾರಿಗಳ ಟಾಸ್ಕ್ ಫೋರ್ಸ್ ಮಾಡಬೇಕು. ಕಾಲ ಕಾಲಕ್ಕೆ ನೀಡಲಾಗುವು ಸೂಚನೆಯನ್ನು ಕಟ್ಟುನಿಟ್ಟಾಗಿ ಪಾಲಿಸ ಬೇಕೆಂದು ಸಚಿವ ರವು ಅಧಿಕಾರಿಗಳಿಗೆ ಸೂಚಿಸಿದರು.
ಹೆಚ್ಚುವರಿ ಚಿಕಿತ್ಸಾ ಘಟಕಗಳ ಸ್ಥಾಪನೆ: ಡಾ.ಮಂಜುನಾಥ್
ಹೊರ ದೇಶಗಳಿಂದ ಜಿಲ್ಲೆಗೆ ಬಂದ ಜನರನ್ನು ಪ್ರಾಥಮಿಕ ಪರೀಕ್ಷೆಗೊಳಪಡಿಸಿ 14 ದಿನಗಳ ಕಾಲ ಅಂತಹವರ ಮೇಲೆ ನಿಗಾವಹಿಸಲಾಗುತ್ತದೆ. ಜಿಲ್ಲಾ ಆಸ್ಪತ್ರೆ, ಹೆರಿಗೆ ಆಸ್ಪತ್ರೆ, ಮತ್ತು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಪ್ರಾದೇಶಿಕ ಕೇಂದ್ರದಲ್ಲಿ ಹೆಚ್ಚುವರಿ ಚಿಕಿತ್ಸಾ ಘಟಕಗಳು ಹಾಗೂ ಐಸ್ಯೂಲೇಷನ್ ಕೊಠಡಿಗಳನ್ನು ತೆರೆಯಲಾಗಿದೆ ಎಂದು ಸರ್ವೇಕ್ಷಣಾಧಿಕಾರಿ ಡಾ.ಮಂಜುನಾಥ್ ತಿಳಿಸಿದರು.







