ಜನತಾ ಕರ್ಫ್ಯೂ: ಪುತ್ತೂರು ಸಂಪೂರ್ಣ ಸ್ತಬ್ಧ; ಅಂಗಡಿ ಮುಂಗ್ಗಟ್ಟು, ವಾಹನ, ಜನ ಸಂಚಾರ ಬಂದ್

ಪುತ್ತೂರು, ಮಾ.22: ಕೊರೋನ ವಿರುದ್ಧದ ಹೋರಾಟದ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ ನೀಡಿರುವ ಕರೆಯಂತೆ ರವಿವಾರ ಬೆಳಗ್ಗೆಯಿಂದಲೇ ಪುತ್ತೂರು ನಗರ, ಗ್ರಾಮೀಣ ಪ್ರದೇಶದಲ್ಲಿ ಸಂಪೂರ್ಣ ಬಂದ್ ಆಗಿದೆ. ಯಾವುದೇ ವಾಹನ ಸಂಚಾರ, ಜನ ಸಂಚಾರವಿಲ್ಲದೆ ರಸ್ತೆಗಳು ಬಿಕೋ ಎನ್ನುತ್ತಿವೆ. ಅಂಗಡಿ ಮುಂಗ್ಗಟ್ಟುಗಳು ಸಂಪೂರ್ಣ ಮುಚ್ಚಿವೆ.
ಪುತ್ತೂರು ಕೆಸ್ಸಾರ್ಟಿಸಿ ಬಸ್ಸುಗಳು ಸಂಚಾರ ರದ್ದುಗೊಳಿಸಿದೆ. ಖಾಸಗಿ ಬಸ್ಸುಗಳೂ ಸೇರಿದಂತೆ ಲಾರಿ, ಆಟೋ ರಿಕ್ಷಾ, ಕಾರು, ಟೆಂಪೋ ಯಾವುದೂ ರಸ್ತೆಗಿಳಿಯಲಿಲ್ಲ. ಬೆರಳೆಣಿಕೆಯ ಕೆಲವೊಂದು ದ್ವಿಚಕ್ರ ವಾಹನಗಳು ನಗರದ ರಸ್ತೆಗಳಲ್ಲಿ ಓಡಾಟ ನಡೆಸುತ್ತಿವೆ. ಪೆಟ್ರೋಲ್ ಬಂಕ್, ಮಾಲ್, ಅಂಗಡಿಗಳು, ಹೋಟೆಲ್, ಕ್ಯಾಂಟಿನ್, ಜ್ಯೂಸ್, ಬೇಕರಿ, ದಿನಸಿ ಅಂಗಡಿಗಳು ಆಭರಣ ಮಳಿಗೆ, ಬಾರ್ & ರೆಸ್ಟೋರೆಂಟ್, ಸೆಲೂನ್, ಬ್ಯೂಟಿ ಪಾರ್ಲರ್ ಸೇರಿದಂತೆ ಎಲ್ಲ ಬಗೆಯ ಅಂಗಡಿಗಳನ್ನು ಬಂದ್ ಮಾಡಿ ಜನತಾ ಕರ್ಫ್ಯೂಗೆ ಸಾರ್ವಜನಿಕರು ಬೆಂಬಲ ನೀಡಿದ್ದಾರೆ. ನಗರದ ಎಲ್ಲಾ ಖಾಸಗಿ ಆಸ್ಪತ್ರೆ ಮತ್ತು ಕ್ಲಿನಿಕ್‌ಗಳು ಬಂದ್ ಆಗಿವೆ. ತುರ್ತು ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಯಲ್ಲಿ ಅವಕಾಶ ನೀಡಲಾಗಿದೆ. ಪೆಟ್ರೋಲ್ ಬಂಕ್‌ಗಳಲ್ಲಿ ತುರ್ತು ಪೆಟ್ರೋಲ್ ವಿತರಣೆಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಪುತ್ತೂರಿನ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಪೊಲೀಸ್ ಕಾವಲು ರಹಿತ ಕರ್ಫ್ಯೂ ಕಂಡು ಬಂದಿತ್ತು.
ಚರ್ಚ್‌ಗಳಲ್ಲಿ ಪ್ರಾರ್ಥನೆಯಿಲ್ಲ
ಪುತ್ತೂರು ನಗರದ ಹೃದಯ ಭಾಗದಲ್ಲಿರುವ ಮಾಯ್ದೇ ದೇವುಸ್ ಚರ್ಚ್ ಸೇರಿದಂತೆ ತಾಲೂಕಿನ ಎಲ್ಲಾ ಚರ್ಚ್‌ಗಳಲ್ಲಿ ರವಿವಾರದ ಸಾಮೂಹಿಕ ಪ್ರಾರ್ಥನೆ ನಡೆಯಲಿಲ್ಲ. ಬಿಷಪ್ ಸೂಚನೆಯಂತೆ ಕ್ರೈಸ್ತ ಸಮುದಾಯದವರು ಮನೆಯಲ್ಲಿಯೇ ಪ್ರಾರ್ಥನೆಯನ್ನು ಮಾಡಿರುವುದಾಗಿ ತಿಳಿದು ಬಂದಿದೆ. ನಗರದಲ್ಲಿ ಪೇಪರ್ ಸ್ಟಾಲ್‌ಗಳು ಎಂದಿನಂತೆ ತೆರದಿತ್ತು. ಹಾಲು ಮಾರಾಟ ಬೆಳಗ್ಗೆ 9 ಗಂಟೆಯ ತನಕ ನಡೆದಿದ್ದು, ಬಳಿಕ ಹಾಲು ಮಾರಾಟ ಅಂಗಡಿಗಳು ಬಂದ್ ಆಗಿವೆ. ನಗರದಲ್ಲಿ ಮೆಡಿಕಲ್ ಶಾಪ್‌ಗಳೂ ಬಂದ್ ನಡೆಸಿ ಜನತಾ ಕರ್ಫ್ಯೂಗೆ ಬೆಂಬಲ ನೀಡಿದೆ.








