ಕೊರೋನ ವೈರಸ್: ಸರಕಾರಿ, ಖಾಸಗಿ ವಲಯವನ್ನು ಸಾಮರ್ಥ್ಯದಷ್ಟು ಬಳಸಿಕೊಂಡಿಲ್ಲ: ಸೋನಿಯಾ ಗಾಂಧಿ

ಹೊಸದಿಲ್ಲಿ, ಮಾ.22: ತಿಂಗಳೊಳಗೆ ಹಲವು ದೇಶಗಳಲ್ಲಿ ಸಾವಿರಾರು ಜನರನ್ನು ಬಲಿ ಪಡೆದಿರುವ ಕೋವಿಡ್-19 ವೈರಸ್ ತಡೆಗಟ್ಟಲು ನಮ್ಮ ಸರಕಾರ ಖಾಸಗಿ ಹಾಗೂ ಸಾರ್ವಜನಿಕ ವಲಯವನ್ನು ಸಾಮರ್ಥ್ಯದಷ್ಟು ಬಳಸಿಕೊಂಡಿಲ್ಲ ಎಂದು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅಭಿಪ್ರಾಯಪಟ್ಟಿದ್ದಾರೆ.
‘‘ಕಾಯಿಲೆ ಬರುವುದನ್ನು ತಡೆಯಲು ತಪಾಸಣೆ ನಡೆಸುವುದು ಅತ್ಯಂತ ಮುಖ್ಯ. 130 ಕೋಟಿ ಜನಸಂಖ್ಯೆ ಇರುವ ನಮ್ಮ ದೇಶದಲ್ಲಿ ಈ ತನಕ ಕೇವಲ 15,701 ಜನರ ಸ್ಯಾಂಪಲ್‌ನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಇಷ್ಟೊಂದು ಸಮಯಾವಕಾಶವಿದ್ದ ಹೊರತಾಗಿಯೂ, ಇತರ ದೇಶಗಳ ಎಚ್ಚರಿಕೆ ಹಾಗೂ ಪಾಠದ ಹೊರತಾಗಿಯೂ ನಾವು ಸಾರ್ವಜನಿಕ ಹಾಗೂ ಖಾಸಗಿ ವಲಯವನ್ನು ಹೆಚ್ಚು ಸಮರ್ಥವಾಗಿ ಬಳಸಿಕೊಂಡಂತೆ ಕಾಣುತ್ತಿಲ್ಲ. ಇದು ಬದಲಾಗಬೇಕು. ನಾವು ಎಲ್ಲ ಪ್ರಕರಣಗಳನ್ನು ಕಣ್ಗಾವಲಿನಲ್ಲಿ ಪರೀಕ್ಷಿಸುವ ಮೂಲಕ ಆರಂಭಿಸಬೇಕು. ಇತರ ಎಲ್ಲ ರೋಗ ಲಕ್ಷಣ ಪ್ರಕರಣಗಳಿಗೆ ಧನಾತ್ಮಕವಾಗಿ ಪರೀಕ್ಷಿಸುವವರೊಂದಿಗೆ ಸಂಪರ್ಕಕ್ಕೆ ಬರುವವರಿಗೆ ವಿಸ್ತರಿಸಬೇಕು ’’ಎಂದು ಸೋನಿಯಾ ಹೇಳಿದ್ದಾರೆ.
ಅಗತ್ಯವಾದ ತೆರಿಗೆ ವಿನಾಯಿತಿ, ಬಡ್ಡಿ ಸಬ್ಸಿಡಿ ಸೇರಿದಂತೆ ಸಮಗ್ರ ವಲಯವಾರು ಪರಿಹಾರ ಪ್ಯಾಕೇಜ್‌ನ್ನು ಸರಕಾರವು ತಕ್ಷಣವೇ ಘೋಷಿಸಬೇಕಾಗಿದೆ. ಸಂಬಳ ಪಡೆಯುವ ವರ್ಗಕ್ಕೆ ಮತ್ತು ಆರ್‌ಬಿಐ ಇವಿಎಂಗಳ ಮುಂದೂಡಿಕೆಯನ್ನು ಪರಿಗಣಿಸಬೇಕು ಎಂದು ಸೋನಿಯಾ ಒತ್ತಾಯಿಸಿದರು.
ಎಲ್ಲ ಭಾರತೀಯರು ಮನೆಯಲ್ಲೇ ಉಳಿದುಕೊಳ್ಳಿ. ಹಿರಿಯರು ಹಾಗೂ ಮಕ್ಕಳ ಮೇಲೆ ಹೆಚ್ಚಿನ ನಿಗಾ ಇಡಿ. ಮನೆಯಲ್ಲಿ ಉಳಿದುಕೊಳ್ಳುವ ನಿರ್ಧಾರದಿಂದ ಕೊರೋನ ವೈರಸ್ ಹಬ್ಬುವುದನ್ನು ತಡೆಗಟ್ಟಬಹುದು. ಕೈ ಸ್ವಚ್ಛಗೊಳಿಸುವುದು, ಮುಖ ಸ್ಪರ್ಶಿಸದೇ ಇರುವುದು ಸೇರಿದಂತೆ ಎಲ್ಲ ಮುನ್ನೆಚ್ಚರಿಕೆ ವಹಿಸಬೇಕು ಎಂದು ಹೇಳಿದ್ದಾರೆ.







