ಮಂಗಳೂರಿನಲ್ಲಿ ಸಂಕಷ್ಟಕ್ಕೆ ಸಿಲುಕಿರುವವರಿಗೆ ಊಟ ಹಂಚುತ್ತಿರುವ ಇಬ್ಬರು
ಜನತಾ ಕರ್ಫ್ಯೂನ ನಡುವೆ ಮಾನವೀಯ ಸೇವೆ

ಮಂಗಳೂರು, ಮಾ.22: ಹೊಟೇಲ್, ಅಂಗಡಿ ಮುಂಗಟ್ಟುಗಳು ಕೂಡಾ ಮುಚ್ಚಿರುವ ಕಾರಣ ಇಂದು ಮನೆಗಳಿಗೂ ಹೋಗಲಾರದೆ, ಇತ್ತ ನಗರದಲ್ಲಿ ಮನೆಯೂ ಇಲ್ಲದೆ, ಕಾಲ ಕಳೆಯುವ ದಿನಕೂಲಿ ಕಾರ್ಮಿಕರು ಇಂದು ಹೊಟ್ಟೆಗೆ ಆಹಾರವಿಲ್ಲದೆ ಪರದಾಡುವ ಪರಿಸ್ಥಿತಿ. ಇದೇ ವೇಳೆ ನಗರದ ವಿವಿಧ ಕಡೆ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರ ಪಾಡು ಕೂಡಾ ಇದೇ ತೆರನದ್ದು. ಆದರೆ ಮಧ್ಯಾಹ್ನದ ವೇಳೆ ಆಪದ್ಬಾಂಧವರಂತೆ ಬಂದವರು ಮಂಗಳೂರಿನ ರೋಟರಿ ಕ್ಲಬ್ ಹಿಲ್‌ಸೈಡ್‌ನ ಅಧ್ಯಕ್ಷ ದಿನೇಶ್ ಮಲ್ಯ ಹಾಗೂ ಮನೀಶ್ ರಾವ್!
ನಗರದ ಕಂಕನಾಡಿ ಬಳಿ 25 ಪೊಲೀಸ್ ಸಿಬ್ಬಂದಿ ವಾಹನದೊಂದಿಗೆ ಕರ್ತವ್ಯದಲ್ಲಿದ್ದು, ಅಲ್ಲಿಗೆ ಕಾರಿನಲ್ಲಿ ಬಂದ ಇವರಿಬ್ಬರು, ಅವರಲ್ಲಿ ಊಟದ ವ್ಯವಸ್ಥೆ ಆಗಿದೆಯಾ ಎಂದು ವಿಚಾರಿಸಿದರು. ಅದಾಗಲೇ ಮಧ್ಯಾಹ್ನದ ಊಟಕ್ಕೇನು ಮಾಡುವುದು ಎಂದು ಚಿಂತಿತರಾಗಿದ್ದ ಪೊಲೀಸ್ ಸಿಬ್ಬಂದಿಗೆ ಇವರಿಬ್ಬರು ಕೇಳಿದ್ದನ್ನು ಕೇಳಿ ಅಚ್ಚರಿ. ಅವರಿಬ್ಬರು ಕಾರನ್ನು ನಿಲ್ಲಿಸಿ, ಕಾರಿನ ಹಿಂಬದಿಯಲ್ಲಿ ಇರಿಸಲಾಗಿದ್ದ ಆಹಾರದ (ಅನ್ನ, ಸಾಂಬಾರು, ಪಲ್ಯ) ಪ್ಯಾಕೆಟ್‌ಗಳನ್ನು ಲೆಕ್ಕ ಮಾಡಿ 25 ಪ್ಯಾಕೆಟ್‌ಗಳನ್ನು ಪೊಲೀಸರಿಗೆ ನೀಡಿದರು. ಇದೇ ವೇಳೆ ಅಲ್ಲಿದ್ದ ಇಬ್ಬರು ಕೂಲಿ ಕಾರ್ಮಿಕರೂ ಆಹಾರದ ಪ್ಯಾಕೇಟ್‌ಗಳನ್ನು ಪಡೆದುಕೊಂಡರು.
ಈ ಸಂದರ್ಭ ಅಲ್ಲಿದ್ದ ವಾರ್ತಾಭಾರತಿ ಪ್ರತಿನಿಧಿ ಅವರನ್ನು ಮಾತಿಗಿಳಿಸಿದಾಗ ಅವರು ಪ್ರತಿಕ್ರಿಯೆ ನೀಡಲು ಹಿಂದೇಟು ಹಾಕಿದರು. ಇದು ನಮ್ಮ ಕರ್ತವ್ಯ ಎಂದಷ್ಟೇ ಹೇಳಿದರು. ಆಗ ಪೊಲೀಸ್ ಸಿಬ್ಬಂದಿಯೊಬ್ಬರು ಮಾತನಾಡುತ್ತಾ, ‘‘ನಾವು ಮಧ್ಯಾಹ್ನದ ಊಟಕ್ಕೇನು ಮಾಡುವುದು, ಎಲ್ಲಿ ಹೋಗುವುದು ಎಂದು ಮಾತನಾಡುತ್ತಿದ್ದಾಗಲೇ ನೀವು ಆಪದ್ಬಾಂಧವರಂತೆ ಬಂದು ಊಟ ಬೇಕಾ ಎಂದು ಕೇಳಿದ್ದೀರಿ. ತುಂಬಾ ಖುಷಿ ಆಯಿತು. ಇಂತಹ ಸಂದರ್ಭದಲ್ಲಿ ಇದೊಂದು ರೀತಿಯ ಮಾನವೀಯ ಕಾರ್ಯ’’ ಎಂದಾಗ ಅಲ್ಲಿದ್ದ ಇತರ ಪೊಲೀಸರು ಕೂಡಾ ದನಿಗೂಡಿಸಿದರು.
ಮತ್ತೆ ಅವರಿಬ್ಬರನ್ನು ಮಾತಿಗಿಳಿಸಿದಾಗ, ‘‘ಇಂದು ಯಾರಾದರೂ ಪ್ರಯಾಣಿಕರಿಗೆ, ದಾರಿ ಹೋಕರಿಗೆ ಅಥವಾ ದಾರಿ ಮಧ್ಯೆ ಸಿಕ್ಕಿ ಹಾಕಿಕೊಂಡವರಿಗೆ ಊಟದ ವ್ಯವಸ್ಥೆಗೆ ತೊಂದರೆಯಾಗಬಹುದು ಎಂಬ ಲೆಕ್ಕಾಚಾರದಲ್ಲಿ 100 ಊಟದ ಪ್ಯಾಕೇಟ್‌ಗಳನ್ನು ರೆಡಿ ಮಾಡಿ ತಂದಿದ್ದೆವು. ನಗರದ ಕೆಎಸ್ಸಾರ್ಟಿಸಿ ಬಸ್ಸು ನಿಲ್ದಾಣ, ಪಂಪ್‌ವೆಲ್ ಬಳಿ ಇದ್ದವರಿಗೆ ಆಹಾರದ ಪ್ಯಾಕೇಟ್ ನೀಡಿ ಇಲ್ಲಿಗೆ ಬಂದಿದ್ದೇವೆ’’ ಎಂದು ದಿನೇಶ್ ಮಲ್ಯ ಹೇಳಿದರು.
ಎಲ್ಲರೂ ಮನೆಯಲ್ಲೇ ಉಳಿದುಕೊಂಡು ನಗರವೆಲ್ಲಾ ನಿಶ್ಶಬ್ಧವಾಗಿರುವ ಸಂದರ್ಭ, ರಸ್ತೆಗಳಲ್ಲಿ ಹಸಿದವರಿಗೆ ಊಟ ನೀಡುವ ದಿನೇಶ್ ಮಲ್ಯ ಹಾಗೂ ಮನೀಶ್ ರಾವ್ ಅವರ ಮಾನವೀಯ ತುಡಿತ ಮೆಚ್ಚುವಂತದ್ದು.













