‘ಮೋದಿ ವಿರೋಧಿಗಳನ್ನು ಭೇಟಿ ಮಾಡಿ ಹೋಗು ಕೊರೋನ’ ಮೆಸೇಜ್ ಹರಡಿದ ಆರೋಪ: ಪುತ್ತೂರಿನ ವೈದ್ಯನ ವಿರುದ್ಧ ದೂರು

ಪುತ್ತೂರು, ಮಾ.22: ‘‘ಮೋದಿ ವಿರೋಧಿಗಳನ್ನು ಭೇಟಿ ಮಾಡಿ ಹೋಗು ಕೊರೋನ’’ ಎಂಬ ಸಂದೇಶನ್ನು ಸಾಮಾಜಿಕ ಜಾಲತಾಣದಲ್ಲಿ ಫಾರ್ವರ್ಡ್ ಮಾಡಿದ್ದಾರೆ ಎಂದು ಆರೋಪಿಸಿ ಪುತ್ತೂರಿನ ಖಾಸಗಿ ಆಸ್ಪತ್ರೆಯ ವೈದ್ಯ ಡಾ.ಸುರೇಶ್ ಪುತ್ತೂರಾಯ ಎಂಬವರ ವಿರುದ್ಧ ಪುತ್ತೂರು ನಗರ ಠಾಣೆಗೆ ದೂರು ನೀಡಲಾಗಿದೆ.
ನರಿಮೊಗರು ಗ್ರಾಮದ ಪುರುಷರಕಟ್ಟೆ ನಿವಾಸಿ ಪಿ.ಬಿ.ಕೆ.ಇಬ್ರಾಹೀಂ ಎಂಬವರು ಈ ದೂರು ನೀಡಿದ್ದಾರೆ. ಜಾಗತಿಕವಾಗಿ ಭೀತಿಯನ್ನುಂಟು ಮಾಡಿರುವ ಕೊರೋನ ವೈರಸ್ ಸೋಂಕು ಬಗ್ಗೆ ಡಾ.ಸುರೇಶ್ ಪುತ್ತೂರಾಯ ಸಾಮಾಜಿಕ ಜಾಲತಾಣದಲ್ಲಿ ವಿಕೃತವಾಗಿ ಬರೆದು ವೈದ್ಯಕೀಯ ಕ್ಷೇತ್ರಕ್ಕೆ ಅಪಚಾರ ಎಸಗಿದ್ದು, ಅವರು ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಇಬ್ರಾಹೀಂ ಪೊಲೀಸ್ ದೂರಿನಲ್ಲಿ ಆಗ್ರಹಿಸಿದ್ದಾರೆ.
‘‘ಪ್ರೀತಿಯ ಕೊರೋನ, ಹೇಗಿದ್ದರೂ ಬಂದಿದ್ದೀಯ. ಮೋದಿ ವಿರೋಧಿಗಳನ್ನು ಬಂದು ಭೇಟಿ ಮಾಡಿ ಹೋಗು. ಇಲ್ಲದಿದ್ದರೆ ಅವರೆಲ್ಲರೂ ಸಾಕ್ಷ ಕೇಳುತ್ತಾರೆ’’ ಎಂಬ ಸಂದೇಶ ಡಾ.ಸುರೇಶ್ ಪುತ್ತೂರಾಯ ಅವರ ಸಂದೇಶ ಫಾರ್ವರ್ಡ್ ಆಗಿ ತನಗೆ ಬಂದಿದೆ. ಈ ರೀತಿಯ ಸಂದೇಶವು ಪ್ರಚೋದನಕಾರಿಯಾಗಿದೆ. ಈ ಸಂದೇಶ ಹರಡಿದ ಆರೋಪಿ ಪುತ್ತೂರಿನಲ್ಲಿ ವೈದ್ಯರಾಗಿ ಸಾಮಾಜಿಕ, ರಾಜಕೀಯ ಪ್ರಬಲರಾಗಿದ್ದಾರೆ. ಇವರ ಈ ಸಂದೇಶವನ್ನು ಓದಿ ಅದರಿಂದ ಪ್ರಚೋದನೆಗೊಂಡು ಕೋಮುಗಲಭೆ ಉಂಟಾಗುವ ಸಾಧ್ಯತೆಗಳಿದ್ದು ಜವಾಬ್ದಾರಿಯುತ ಸ್ಥಾನದಲ್ಲಿರುವ ಆರೋಪಿಯು ಕೋಮು ಪ್ರಚೋದನೆಯ ಸಂದೇಶವನ್ನು ಉದ್ದೇಶಪೂರ್ವಕವಾಗಿ ಸಾಮಾಜಿಕ ಜಾಲತಾಣದಲ್ಲಿ ಹರಡಿದ್ದಾರೆ. ಆದ್ದರಿಂದ ಆರೋಪಿಯ ವಿರುದ್ಧ ಸೂಕ್ತ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ದೂರಿನಲ್ಲಿ ವಿನಂತಿಸಿದ್ದಾರೆ.







